ಶಿರಾಡಿ: ತಾಯಿ -ಮಗು ಕೊಲೆ ಪ್ರಕರಣದ ಅಪರಾಧಿಗೆ ಮರಣದಂಡನೆ
ಪುತ್ತೂರು, ಆ.12: ಎಂಟು ವರ್ಷದ ಹಿಂದೆ ಪುತ್ತೂರು ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣವನ್ನು ಘೋರ ಅಪರಾಧ ಎಂದು ಪರಿಗಣಿಸಿರುವ ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪ ಎದುರಿಸುತ್ತಿದ್ದ ಜಯೇಶ್‌ಗೆ ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಸೆಕ್ಷನ್ 450, 392 ಹಾಗೂ 302 ಪ್ರಕಾರ ಆರೋಪಿ ಮರಣದಂಡನೆಗೆ ಯೋಗ್ಯವಾದ ಅಪರಾಧ ಎಸಗಿದ್ದಾನೆ ಎಂದು ತೀರ್ಮಾನಿಸಿರುವ ನ್ಯಾಯಾಲಯ ಶುಕ್ರವಾರ ಆರೋಪಿಗೆ ಈ ಶಿಕ್ಷೆ ವಿಧಿಸಿದೆ. ಪುತ್ತೂರಿನ ನ್ಯಾಯಾಲಯದ ಇತಿಹಾಸದಲ್ಲಿ ಮರಣದಂಡನೆಯ ಎರಡನೆ ತೀರ್ಪು ಇದಾಗಿದ್ದು, ಬೆಟ್ಟಂಪಾಡಿಯಲ್ಲಿ ತನ್ನ 2 ಮಕ್ಕಳನ್ನು ಮತ್ತು ಅತ್ತೆ ಹಾಗೂ ನಾದಿನಿಯನ್ನು ಕೊಲೆ ನಡೆಸಿದ್ದ ರಮೇಶ್ ನಾಯ್ಕ ಎಂಬಾತನಿಗೆ ಮೊದಲ ಬಾರಿಗೆ ಮರಣದಂಡನೆ ನೀಡಲಾಗಿತ್ತು. ಇದೀಗ ಜಯೇಶ್‌ಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
2008 ಆಗಸ್ಟ್ 2 ರಂದು ಶಿರಾಡಿಯ ಸೌಮ್ಯಾ ಮತ್ತು ಅವರ ಪುತ್ರ ಜಿಷ್ಣು ಎಂಬವರನ್ನು ಕೊಲೆ ನಡೆಸಿದ ಆರೋಪವನ್ನು ಜಯೇಶ್ ಎದುರಿಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 27 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, ಆರೋಪಿಯನ್ನು ಅಪರಾಧಿ ಕಳೆದ ಮಂಗಳವಾರ ನ್ಯಾಯಾಲಯ ಘೋಷಿಸಿತ್ತು. ಬುಧವಾರ ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕ ಉದಯಕುಮಾರ್ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಾಧೀಶ ರಾಮಚಂದ್ರ ಶಿಕ್ಷೆ ಪ್ರಕಟನೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದರು.
ಶಿರಾಡಿ ಸಮೀಪದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ಆರೋಪಿ ಜಯೇಶ್ ಸಿರಿಬಾಗಿಲು ಗ್ರಾಮದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ತನ್ನ ದೊಡ್ಡಪ್ಪನ ಮಗ ರೋಹಿತ್ ಯಾನೆ ಲವ ಅವರ ಪತ್ನಿ ಸೌಮ್ಯ ಅವರ ಕುತ್ತಿಗೆಗೆ ಬಟ್ಟೆಯನ್ನು ಸುತ್ತಿ ಮಾರಕಾಯುಧದಿಂದ ಹೊಟ್ಟೆಗೆ ತಿವಿದು, ಕೊಲೆಗೈದು ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದಲ್ಲದೆ ಸೌಮ್ಯಾರ ಪುತ್ರ 3 ವರ್ಷ ಪ್ರಾಯದ ಜಿಷ್ಣುವಿಗೂ ಚೂರಿಯಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ. ಚಿನ್ನಾಭರಣಕ್ಕಾಗಿ ತನ್ನ ಪತ್ನಿ, ಮಗುವನ್ನು ಕೊಲೆ ಮಾಡಲಾಗಿದೆ ಎಂದು ಸೌಮ್ಯಾರ ಪತಿ ಲೋಹಿತ್ ಪೊಲೀಸರಿಗೆ ದೂರು ನೀಡಿದ್ದರು.
ಮೂರ್ತೆದಾರಿಕೆ ಜೊತೆ ಮೇಸ್ತ್ರಿ ಕೆಲಸಕ್ಕೂ ಹೋಗುತ್ತಿದ್ದ ತಾನು ಅಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದೆ. ಗುಂಡ್ಯದಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಬರುತ್ತಿದ್ದ ವೇಳೆ ಮನೆಯ ಮುಂಭಾಗದಲ್ಲಿರುವ ಗೇಟಿನ ಬಳಿ ತಲುಪುತ್ತಿದ್ದಂತೆಯೇ ಮನೆಯ ಒಳಗಡೆ ಇದ್ದ ನನ್ನ ಚಿಕ್ಕಪ್ಪನ ಮಗ ಜಯೇಶ್ ನನ್ನನ್ನು ನೋಡಿ ಗಾಬರಿಯಿಂದ ಓಡಲಾರಂಭಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಎಲ್ಲೋ ಹೋಗಿ ಬರುತ್ತೇನೆ ಎಂದು ಹೇಳಿ ಓಡಿ ಹೋಗಿದ್ದ. ಮನೆಯ ಬಾಗಿಲ ಬಳಿ ಬಂದು ನಾನು ಪತ್ನಿ ಸೌಮ್ಯಳನ್ನು ಕರೆದರೂ ಆಕೆ ಹೊರ ಬರಲಿಲ್ಲ.ಒಳಗಡೆ ಹೋಗಿ ನೋಡಿದಾಗ ತಾಯಿ, ಮಗ ಹೆಣವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.ಆರೋಪಿ ಜಯೇಶ್ ಸೌಮ್ಯಾಳ ಕತ್ತಿನಲ್ಲಿದ್ದ ಕರಿಮಣಿ ಸರ, ಬೆಂಡೋಲೆ ಕಿತ್ತು ತೆಗೆದಿದ್ದು ಚಿನ್ನಾಭರಣಕ್ಕಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಲೋಹಿತ್ ಅವರು ಉಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ನಡೆದ ಸಂದರ್ಭ ಆಗಿನ್ನೂ 19ರ ಹರೆಯದವನಾಗಿದ್ದ ಆರೋಪಿ ಜಯೇಶ್ ಕೆಲವೊಂದು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಮನೆಯವರು ಆತನನ್ನು ಮನೆಯಿಂದ ಹೊರ ಹಾಕಿದ್ದರು. ತಾಯಿ ಮಗುವಿನ ಕೊಲೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ನೆಲೆಸಿದ್ದ. ಮುಸ್ಲಿಂ ಯುವತಿಯೊಬ್ಬಳನ್ನು ವಿವಾಹವಾಗಿ ತನ್ನ ಹೆಸರನ್ನು ಶಾಕೀರ್ ಯಾನೇ ಸಾಹಿರ್ ಎಂದು ಬದಲಾಯಿಸಿಕೊಂಡಿದ್ದ.
ಬಂಧನಕ್ಕೆ ಕಾರಣವಾದ ‘ತೆಂಗಿನಮರ’
ಅಲಪುರಂ ಜಿಲ್ಲೆಯಲ್ಲಿ ನೆಲೆಸಿದ್ದ ಆತ ಅಲ್ಲಿ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತಿದ್ದ. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ್ದ ಅಲ್ಲಿನ ಪೊಲೀಸರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಆತನನ್ನು ವಿಚಾರಣೆ ನಡೆಸಿದ ಸಂದರ್ದಲ್ಲಿ ಆತ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ವಿಚಾರ ತಿಳಿದು ಬಂದಿತ್ತು. ತೆಂಗಿನ ಮರ ಹತ್ತಿ ಕುಳಿತ ವಿಚಾರದಲ್ಲಿ 2012ರ ಅಕ್ಟೋಬರ್ 10ರಂದು ಕೇರಳ ಪೊಲೀಸರ ಅತಿಥಿಯಾಗಿದ್ದ ಆರೋಪಿಯನ್ನು ಬಳಿಕ ಉಪ್ಪಿನಂಗಡಿ ಪೊಲೀಸರು ಕೇರಳ ಪೊಲೀಸರಿಂದ ವಶಕ್ಕೆ ಪಡೆದುಕೊಂಡು ಶಿರಾಡಿ ಡಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿಸಿ ಅಕ್ಟೋಬರ್ 11ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ತಪ್ಪಿಸಿಕೊಂಡರೂ ಸಿಕ್ಕಿಬಿದ್ದಿದ್ದ
ಕಳೆದ ಎಪ್ರಿಲ್ 5ರಂದು ಪುತ್ತೂರು ನ್ಯಾಯಾಲಯಕ್ಕೆ ಸಾಕ್ಷಿ ವಿಚಾರಣೆಗಾಗಿ ಪೊಲೀಸರು ಕರೆತಂದಿದ್ದ ವೇಳೆ ಆರೋಪಿ ಜಯೇಶ್ ಪುತ್ತೂರಿನ ನ್ಯಾಯಾಲಯದ ಕಟಕಟೆಯಿಂದ ಹಾರಿ ತಪಿಸಿಕೊಳ್ಳಲು ಯತ್ನಿಸಿದ್ದ. ನ್ಯಾಯಾಲಯ ಆವರಣದಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಿ ಹೋಗುತ್ತಿದ್ದ ಆತನನ್ನು ವಕೀಲರು ಮತ್ತು ಸಾರ್ವಜನಿಕರು ಸೇರಿಕೊಂಡು ಪುತ್ತೂರು ಮಿನಿವಿಧಾನ ಸೌಧದ ಎದುರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆಯೂ ಪುತ್ತೂರು ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಜಯೇಶ್ ರಿಕ್ಷಾ ಕಳವು ಪ್ರಕರಣವೊಂದರಲ್ಲಿಯೂ ಅಪರಾಧಿಯಾಗಿ ಶಿಕ್ಷೆ ಅನುಭವಿಸಿದ್ದಾನೆ.
ಶಿರಾಡಿ ತಾಯಿ ಮಗುವಿನ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಆಗಿನ ಉಪಿನಂಗಡಿ ಠಾಣಾ ವೃತ್ತ ನಿರೀಕ್ಷಕ ಹಾಗೂ ಪ್ರಸ್ತುತ ಬಂಟ್ವಾಳದಲ್ಲಿ ಡಿವೈಎಸ್ಪಿಯಾಗಿ ಕೆಲಸ ನಿರ್ವಹಿಸುತ್ತಿರುವ ರವೀಶ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ಮಾರುತಿ ಜಿ. ನಾಯಕ್ ನಡೆಸಿದ್ದರು. ನಂತರದ ತನಿಖೆಯನ್ನು ಪುತ್ತೂರು ನಗರ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ನಡೆಸಿದ್ದರು. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಉದಯಕುಮಾರ್ ಪ್ರಾರಂಭದ ಹಂತದಿಂದಲೇ ವಾದಿಸಿ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಜಯೇಶ್ ಸೌಮ್ಯಾರನ್ನು ಕೊಲೆ ಮಾಡಿದ ತರುವಾಯ ಆಕೆಯ ಮಾಂಗಲ್ಯ ಸರವನ್ನು ರುಕಿಯಾ ಬಾನು ಎಂಬಾಕೆಯ ಸಹಾಯದಿಂದ ಉಪ್ಪಿನಂಗಡಿಯ ಆರ್.ಕೆ ಜ್ಯುವೆಲ್ಲರ್ಸ್‌ನಲ್ಲಿ ಮಾರಾಟ ಮಾಡಿಸಿದ್ದ. ಉಡುಪಿಯಲ್ಲಿ ಈ ಹಿಂದೆ ರುಕಿಯಾಬಾನು ಎಂಬವರ ಮಗ ಶಮೀರ್ ಹಾಗೂ ಈತ ಒಂದೇ ಕಡೆ ಕೆಲಸ ಮಾಡುತ್ತಿದ್ದು ಸೇಹಿತರಾಗಿದ್ದರು. ಈ ಹಿನ್ನಲೆಯಲ್ಲಿ ತನ್ನ ಅಕ್ಕನ ಸರ ಇದೆಂದು ನಂಬಿಸಿ ಆಕೆಗೆ ಹುಷಾರಿಲ್ಲ ಎಂಬ ನೆಪ ಹೇಳಿ ಸರವನ್ನು ಮಾರಾಟ ಮಾಡುವಂತೆ ರುಕಿಯಾಬಾನುಗೆ ತಿಳಿಸಿದ್ದ. ತನಿಖೆ ವೇಳೆ ಇದು ಬೆಳಕಿಗೆ ಬಂದಿದ್ದು, ಈ ಮಾಂಗಲ್ಯ ಸರವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದರು. ವಿಚಾರಣೆಯಲ್ಲಿ ಮಾಂಗಲ್ಯ ಸರ ಪ್ರಮುಖ ಸಾಕ್ಷಿಯಾಗಿತ್ತು.