×
Ad

ರಿಯೊದಿಂದ ಸಚಿವ ಗೋಯೆಲ್‌ರನ್ನು ವಾಪಸ್ ಕರೆಸಿ:ಪ್ರಧಾನಿಗೆ ಕಾಂಗ್ರೆಸ್ ಸಂಸದರ ಆಗ್ರಹ

Update: 2016-08-12 18:49 IST

ಹೊಸದಿಲ್ಲಿ,ಆ.12: ರಿಯೊ ಒಲಿಂಪಿಕ್ಸ್‌ಗೆ ಭೇಟಿ ನೀಡಿರುವ ಕ್ರೀಡಾ ಸಚಿವ ವಿಜಯ ಗೋಯೆಲ್ ಅವರನ್ನು ಆವರಿಸಿಕೊಂಡಿರುವ ವಿವಾದದ ನಡುವೆಯೇ ಗುರುವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು, ಇದರಲ್ಲಿ ದೇಶದ ಪ್ರತಿಷ್ಠೆ ಒಳಗೊಂಡಿರುವುದರಿಂದ ಅವರನ್ನು ತಕ್ಷಣವೇ ಬ್ರಾಜಿಲ್‌ನಿಂದ ವಾಪಸ್ ಕರೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು.

ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸಿನ ಪ್ರತಾಪಸಿಂಗ್ ಬಾಜ್ವಾ ಅವರು, ಸಚಿವರ ನಡತೆಯ ಬಗ್ಗೆ ಕಳೆದ ಸಂಜೆಯಿಂದಲೇ ಟಿವಿ ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ ಎಂದು ಹೇಳಿದರು.

ರಿಯೊಕ್ಕೆ ಭೇಟಿ ನೀಡಿರುವ ಗೋಯೆಲ್ ಗುರುವಾರ ಪುರುಷರ 56 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿರುವ ಭಾರತದ ಬಾಕ್ಸರ್ ಮನೋಜಕುಮಾರ್ ಅವರನ್ನು ಅಭಿನಂದಿಸಲು ನಿರ್ಬಂಧಿತ ಪ್ರದೇಶವಾದ ಬಾಕ್ಸಿಂಗ್ ಕೋರ್ಟ್‌ನ್ನು ಪ್ರವೇಶಿಸಿದ್ದರು. ಇದು ವಿವಾದವನ್ನು ಸೃಷ್ಟಿಸಿದೆ.

ಈ ವಿಷಯದಲ್ಲಿ ದೇಶದ ಪ್ರತಿಷ್ಠೆಯು ಒಳಗೊಂಡಿದೆ. ಒಲಿಂಪಿಕ್ಸ್ ಸಂಘಟಕರು ಇದನ್ನು ‘ಸಚಿವರ ನಾಚಿಕೆಗೇಡಿನ ವರ್ತನೆ ’ಎಂದು ಬಣ್ಣಿಸಿದ್ದಾರೆ. ಪ್ರಧಾನಿಯವರು ಅವರನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂದು ಬಾಜ್ವಾ ಹೇಳಿದರು. ಇತರ ಕಾಂಗ್ರೆಸ್ ಸದಸ್ಯರೂ ಅವರೊಂದಿಗೆ ಧ್ವನಿಗೂಡಿಸಿದರು.

ಕಾಂಗ್ರೆಸಿನ ಸತ್ಯವ್ರತ ಚತುರ್ವೇದಿಯವರೂ ಏನನ್ನೋ ಹೇಳಿದರಾದರೂ ಗಲಾಟೆಯಲ್ಲಿ ಅದು ಯಾರಿಗೂ ಕೇಳಿಸಲಿಲ್ಲ.

ಒಲಿಂಪಿಕ್ಸ್ ಸಂಘಟನಾ ಸಮಿತಿಯು ತನ್ನ ವಿರುದ್ಧ ಮಾಡಿರುವ ದುರ್ವರ್ತನೆಯ ಆರೋಪವನ್ನು ತಿರಸ್ಕರಿಸಿರುವ ಗೋಯೆಲ್, ಅಂತಹ ಯಾವುದೇ ಘಟನೆ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

ದುರ್ವರ್ತನೆಗಾಗಿ ಮತ್ತು ಅಧಿಕೃತ ಪಾಸ್‌ಗಳಿಲ್ಲದೆ ತನ್ನ ದಂಡಿನೊಡನೆ ಕ್ರೀಡಾ ತಾಣಗಳನ್ನು ಪ್ರವೇಶಿಸಲು ಯತ್ನಿಸಿದ್ದಕ್ಕಾಗಿ ಗೋಯೆಲ್‌ರ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ಒಲಿಂಪಿಕ್ಸ್ ಸಂಘಟನಾ ಸಮಿತಿಯ ಪದಾಧಿಕಾರಿ ಸಾರ್ಹಾ ಪೀಟರ್ಸನ್ ಅವರು ಗುರುವಾರ ಭಾರತೀಯ ಒಲಿಂಪಿಕ್ಸ್ ತಂಡದ ಮುಖ್ಯಸ್ಥ ರಾಕೇಶ ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ಬೆದರಿಕೆಯೊಡ್ಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News