ಬುಲಂದಶಹರ ಸಾಮೂಹಿಕ ಅತ್ಯಾಚಾರ: ಸಿಬಿಐ ವಿಚಾರಣೆಗೆ ಹೈಕೋರ್ಟ್ ಆದೇಶ
ಅಲಹಾಬಾದ್,ಆ.12: ಬುಲಂದಶಹರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಈ ವರೆಗಿನ ತನಿಖೆಯು ತನಗೆ ತೃಪ್ತಿಯನ್ನುಂಟು ಮಾಡಿಲ್ಲ ಎಂದು ಶುಕ್ರವಾರ ಹೇಳಿದ ಅಲಹಾಬಾದ್ ಉಚ್ಚ ನ್ಯಾಯಾಲಯವು ಸಿಬಿಐ ವಿಚಾರಣೆಗೆ ಆದೇಶಿಸುವುದರೊಂದಿಗೆ ಉತ್ತರ ಪ್ರದೇಶದ ಎಸ್‌ಪಿ ಸರಕಾರಕ್ಕೆ ಮುಖಭಂಗವಾಗಿದೆ.
ಜ.29ರಂದು ನಡೆದಿದ್ದ ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಪ್ರಕರಣದ ತನಿಖೆಯ ಮೇಲೆ ನಿಗಾಯಿರಿಸಲು ತಾನು ಉದ್ದೇಶಿಸಿರುವುದಾಗಿ ಹೇಳಿತು. ಪ್ರಕರಣದ ತನಿಖೆ ಕುರಿತಂತೆ ಸ್ಥಿತಿಗತಿ ವರದಿಯೊಂದನ್ನು ರಾಜ್ಯ ಸರಕಾರವು ಗುರುವಾರ ಮೊಹರು ಮಾಡಿದ್ದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ತನಿಖೆಯು ನಡೆಯುತ್ತಿರುವ ರೀತಿಯಾಗಲೀ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಾಗಲೀ ನಮಗೆ ತೃಪ್ತಿಯನ್ನುಂಟು ಮಾಡಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ಬಿ.ಭೋಸಲೆ ಮತ್ತು ನ್ಯಾ.ಯಶವಂತ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಪರಾಧಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಎಫ್‌ಐಆರ್, ಅತ್ಯಾಚಾರ ಬಲಿಪಶುಗಳ ವೈದ್ಯಕೀಯ ವರದಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಮುಂದಿನ ವಿಚಾರಣಾ ದಿನಾಂಕವಾದ ಆ.17ರೊಳಗೆ ತನಗೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿತು.
ನೊಯ್ಡದ ಒಂದೇ ಕುಟುಂಬಕ್ಕೆ ಸೇರಿದ ಆರು ಜನರು ಶಹಜಾನಪುರಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಕಾರನ್ನು ರಾಷ್ಟ್ರೀಯ ಹೆದ್ದಾರಿಯ ಬುಲಂದಶಹರ ಬಳಿ ತಡೆದ ದುಷ್ಕರ್ಮಿಗಳು 13ರ ಹರೆಯದ ಬಾಲಕಿ ಮತ್ತು ಆಕೆಯ ತಾಯಿಯನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಅವರ ಮೇಲೆ ಅತ್ಯಾಚಾರವೆಸಗಿದ್ದರು.