ಕೋಟಿವೃಕ್ಷ ಅಭಿಯಾನ ಯಶಸ್ವಿಗೊಳಿಸಲು ಗೃಹರಕ್ಷಕದಳ ಬದ್ಧ: ಡಾ.ಮುರಲೀ ಮೋಹನ ಚೂಂತಾರು

Update: 2016-08-12 13:24 GMT

ಮಂಗಳೂರು, ಆ.12: ಜಿಲ್ಲೆಯಲ್ಲಿ ಪ್ರಸಕ್ತ 1,000 ಗೃಹ ರಕ್ಷಕ ಸಿಬ್ಬಂದಿಯಿದ್ದು, ಅವರಿಗೆ ವೃಕ್ಷಕೋಟಿ ಅಭಿಯಾನ ಪ್ರಯುಕ್ತ ತಲಾ 2 ಗಿಡವನ್ನು ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು ಹೇಳಿದ್ದಾರೆ.

ಬಂಟ್ವಾಳ, ಬಿ.ಸಿ.ರೋಡ್ ಗೃಹ ರಕ್ಷಕದಳದ ಘಟಕ ಕಚೇರಿಯ ವಠಾರದಲ್ಲಿ ವೃಕ್ಷಕೋಟಿ ಅಭಿಯಾನ ಪ್ರಯುಕ್ತ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ 14 ಘಟಕದಲ್ಲೂ ವನಮಹೋತ್ಸವ ಯೋಜನೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ಈ ಯೋಜನೆಯನ್ನು ಪರಿಣಾಮಕಾರಿಗೊಳಿಸಲು ಪ್ರತಿಜ್ಞಾಪೂರ್ವಕವಾಗಿ ಬದ್ಧರಾಗಿರುವುದಾಗಿ ತಿಳಿಸಿದರು.

ಗೃಹರಕ್ಷಕ ದಳದಿಂದ ಮುಂದಿನ ತಿಂಗಳಲ್ಲಿ ಸ್ವಚ್ಛಭಾರತ್ ಅಭಿಯಾನ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕ ಸ್ಥಳ, ಸರಕಾರಿ ಕಚೇರಿ-ಕಾರ್ಯಾಲಯ ವಠಾರದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುವುದು. ಸ್ಥಳೀಯ ನಗರ, ಪುರಸಭೆ ಆಡಳಿತ, ಗ್ರಾಪಂ ಸಂಸ್ಥೆಗಳು, ತಾಲೂಕಾಡಳಿತದೊಂದಿಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡುವ ಮೂಲಕ ಸ್ವಚ್ಛಭಾರತ ಅಭಿಯಾನಕ್ಕೆ ಕೈ ಜೋಡಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಕಂಪ್ಯೂಟರ್ ಮತ್ತಿತರ ತಾಂತ್ರಿಕ ಕೆಲಸಕಾರ್ಯಗಳಿಗೆ ಗೃಹರಕ್ಷಕ ಬಳಸುವಂತೆ ಈಗಾಗಲೇ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಪ್ರತಿಯೊಂದು ಸಿಬ್ಬಂದಿಗೂ ಕೆಲಸ ಪೂರೈಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದಾಗಿ ತಿಳಿಸಿದ ಅವರು, ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಗೌರವಿಸಿ, ಅವರ ಕರ್ತವ್ಯ, ಕಾರ್ಯನಿರ್ವಹಣೆಗೆ ಸಹಕರಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ತಾಲೂಕು ಘಟಕ ವಠಾರದಲ್ಲಿ ಸಾಂಕೇತಿಕವಾಗಿ ನಡೆಸಿದ ವನಮಹೋತ್ಸವಕ್ಕೆ ಚಾಲನೆ ನೀಡಿದರು. ನಗರ ಪೊಲೀಸ್ ಠಾಣಾಧಿಕಾರಿ ನಂದಕುಮಾರ್, ಘಟಕಾಧಿಕಾರಿ ಎಂ.ಬೋಜ, ಸಿಬ್ಬಂದಿಯಾದ ಬಿ.ಆರ್.ಶ್ರೀನಿವಾಸ್ ಆಚಾರ್ಯ, ಮಾಲತಿ, ಯಾದವ ಜೋಗಿ, ಸಂಪಾವತಿ, ಕೆ.ಯೋಗೀಶ್, ಬಿ.ಅಶೋಕ್, ಮುಹಮ್ಮದ್ ರಫೀಕ್, ಜಯ್, ಅರುಣ್ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News