ಮಹಿಳೆಯನ್ನು ಮಾತೆಯಾಗಿ ಗೌರವಿಸುವ ಸಮಾಜ ನಮ್ಮದು: ಶ್ರೀ ಮಾತಾನಂದಮಯೀ
ಪುತ್ತೂರು, ಆ.12: ಮಹಿಳೆಯನ್ನು ಮಾತೆಯಾಗಿ ಗೌರವಿಸಿಕೊಂಡು ಬಂದಿರುವ ಸಮಾಜ ನಮ್ಮದಾಗಿದ್ದು, ಮಹಿಳೆಗೆ ಸಿಕ್ಕಿರುವ ಸ್ವಾತಂತ್ರ ಸ್ವೇಚ್ಛಾಚಾರವಾಗಬಾರದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಟರಾಜ ವೇದಿಕೆಯಲ್ಲಿ ಶುಕ್ರವಾರ ನಡೆದ ವರಮಹಾಲಕ್ಷ್ಮೀ ಪೂಜಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು.
ಮಹಿಳೆ ಲಕ್ಷ್ಮೀಯಾಗಿ, ದುರ್ಗೆಯಾಗಿ ಗೌರವದ ಸ್ಥಾನವನ್ನು ಪಡೆದಿದ್ದಾಳೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ವೌಲ್ಯಗಳು ಈ ರೀತಿ ಅಧಃಪತನಗೊಂಡರೆ ಸಮಾಜ ಉಳಿಯದು, ಹೆಣ್ಣನ್ನು ತಲೆಯಲ್ಲಿ ಧರಿಸಿಕೊಂಡು ಮಡಿಲಲ್ಲಿ ಆದರಿಸಿದ ಶಿವ ದೇವ ಅರ್ಧನಾರೀಶ್ವರನಾಗಿ ಕಂಗೊಳಿಸಿದವ. ಶ್ರೀಮನ್ನಾರಾಯಣ ತನ್ನ ಪಾದಸೇವಕಿಯಾಗಿ ಕೆಲಸ ಮಾಡಿದ ಲಕ್ಷ್ಮೀಗೆ ತನ್ನ ಹೃದಯದಲ್ಲಿ ಸ್ಥಾನ ನೀಡಿದ. ಅಂಥ ಪೂಜನೀಯ ಸ್ಥಾನ ಹೆಣ್ಣಿಗೆ ಸಿಗಬೇಕಾದರೆ ಆಕೆ ಅಂಥ ವೌಲ್ಯ ಕಾಪಾಡಿಕೊಳ್ಳಬೇಕು. ದುಡ್ಡಿಗಾಗಿ ಗಂಡನನ್ನೇ ಭಸ್ಮ ಮಾಡುವ ಪತ್ನಿಯರು ಇಂದಿನ ಸಮಾಜದಲ್ಲಿರುವುದು ವಿಪರ್ಯಾಸ ಎಂದರು.
ಪುತ್ತೂರು ನಗರಸಭೆಯ ಪೌರಾಯುಕ್ತೆ ರೇಖಾ ಜೆ. ಶೆಟ್ಟಿ, ಸಮರ್ಪಣಾ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನಾ ವಿ. ರೈ ಮಾತನಾಡಿದರು. ಶ್ರೀ ವಜ್ರಮಾತಾ ಮಹಿಳಾ ವಿಕಾಸ ಘಟಕದ ನಿಕಟಪೂರ್ವ ಅಧ್ಯಕ್ಷೆ ನಯನಾ ರೈ ಉಪಸ್ಥಿತರಿದ್ದರು. ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಶುಭಾ ಮಾಲಿನಿ ಮಲ್ಲಿ ಸ್ವಾಗತಿಸಿದರು. ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ರೊಹರಾ ನಿಸಾರ್ ಕಾರ್ಯಕ್ರಮ ನಿರ್ವಹಿಸಿದರು. ಮೀನಾಕ್ಷಿ ರಾಮಚಂದ್ರ ವಂದಿಸಿದರು.