×
Ad

ಮೂಡುಬಿದಿರೆ: ಗದ್ದೆಗಿಳಿದ ಶಾಲಾ ವಿದ್ಯಾರ್ಥಿಗಳು

Update: 2016-08-12 20:06 IST

ಮೂಡುಬಿದಿರೆ, ಆ.12: ಮಕ್ಕಳಿಗೆ ಪುಸ್ತಕದಿಂದ ಸಿಗುವ ಶಿಕ್ಷಣವಿದ್ದರೆ ಮಾತ್ರ ಸಾಲದು. ಬದಲಾಗಿ ಮಸ್ತಕದ ಜ್ಞಾನವನ್ನು ವೃದ್ಧಿಸುವ ಶಿಕ್ಷಣವೂ ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಾರಂಪಾಡಿಯ ವಠಾರದಲ್ಲಿ ಶುಕ್ರವಾರ ಗದ್ದೆಯೆಡೆಗೆ ಮಕ್ಕಳ ಹೆಜ್ಜೆಯ ಮೂಲಕ ಕೆಸರ್‌ಡೊಂಜಿದಿನ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಿಗೆ ಗದ್ದೆಯಲ್ಲಿ ಆಟೋಟದ ಜೊತೆಗೆ ದುಡಿಯುವ ಪಾಠವನ್ನು ಕಲಿಸಲಾಯಿತು.

ಸುರಿಯುತ್ತಿರುವ ಮಳೆಯ ಮಧ್ಯೆಯೂ ವಿದ್ಯಾರ್ಥಿಗಳು ಹಟ್ಟಿಯಿಂದ ಗೊಬ್ಬರವನ್ನು ತೆಗೆದು ಹೊತ್ತುಕೊಂಡು ಹೋಗಿ ಗದ್ದೆಗಳಿಗೆ ಹಾಕುವುದು, ಗದ್ದೆಯನ್ನು ಹದ ಮಾಡುವುದು ಹಾಗೂ ನೇಜಿ ನೆಡುವುದು ಮುಂತಾದ ಕೆಲಸಗಳನ್ನು ಮಾಡಿ ಗಮನ ಸೆಳೆದರು. ಮೊದಲಿಗೆ ಗದ್ದೆಯಲ್ಲಿ ಮಕ್ಕಳಿಗೆ ನಿಧಿ ಶೋಧ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಪಿರಮಿಡ್ ರಚನೆ, ಬಕೆಟ್‌ಗೆ ನೀರು ತುಂಬಿಸುವುದು ಹಾಗೂ ಹಾಳೆಯಲ್ಲಿ ಎಳೆದುಕೊಂಡು ಹೋಗುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಮನರಂಜನೆಯನ್ನು ಒದಗಿಸಲಾಯಿತು. ಶಾಲೆಯಲ್ಲಿ ಪಠ್ಯ ಮತ್ತು ಕ್ರೀಡೆಗೆ ಮಾತ್ರ ತಮ್ಮನ್ನು ವಿನಿಯೋಗಿಸಿಕೊಳ್ಳುತ್ತಿದ್ದ ಆಂಗ್ಲ ಆಧ್ಯಮ ಶಾಲೆಯ ವಿದ್ಯಾರ್ಥಿಗಳು ಜೋರಾಗಿ ಸುರಿಯುತ್ತಿದ್ದ ಮಳೆಯ ಮಧ್ಯೆ ಚಳಿಯಲ್ಲಿ ನಡುಗುತ್ತಲೇ ವಿವಿಧ ಸ್ಪರ್ಧೆ ಮತ್ತು ಗದ್ದೆಯ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಂಡರು. 

ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ರೂಪಾ.ಎಸ್.ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಗದ್ದೆಯ ಬಗ್ಗೆ ಶಿಕ್ಷಣ ನೀಡುವುದು ಉತ್ತಮ ಬೆಳವಣಿಗೆ. ಕೆಸರ್‌ಡೊಂಜಿ ದಿನದ ಮೂಲಕವಾದರೂ ವಿದ್ಯಾರ್ಥಿಗಳು ಗದ್ದೆಯ ಬಗ್ಗೆ ಒಲವನ್ನು ತೋರಲು ಸಾಧ್ಯವಾಗುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳು ಗದ್ದೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದರು. ಆದರೆ, ಈಗ ವರ್ಷಕ್ಕೊಂದು ಸಲ ಕೆಸರ್‌ಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸುವಾಗ ಮಾತ್ರ ಗದ್ದೆಗೆ ಇಳಿಯುವ ಅವಕಾಶವನ್ನು ಪಡೆಯುತ್ತಾರೆಂದ ಅವರು ಮಕ್ಕಳು ಶಾಲಾ ಪಠ್ಯದ ಜೊತೆಗೆ ಇತರ ಚಟುವಟಿಕೆಗಳ ಬಗ್ಗೆಯೂ ತಿಳಿದುಕೊಳ್ಳ ಬೇಕೆಂದರು.

ರೋಟರಿ ಸಂಸ್ಥೆಯ ಸಂಚಾಲಕ ಡಾ. ಯತಿಕುಮಾರಸ್ವಾಮಿ ಗೌಡ ಹಿಂಗಾರವನ್ನು ಅರಳಿಸಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಗದ್ದೆಯ ಮಾಲಕ ನಾರಂಪ್ಪಾಡಿ ಸುಂದರ ಪುತ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ರೋಟರಿ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿಕೋಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಮಸ್ತಕವನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯಲ್ಲಿ ಜನತೆ ಏನು ಮಾಡುತ್ತಾರೆಂದು ಗೊತ್ತಾಗಬೇಕು. ಮುಂದಿನ ದಿನಗಳಲ್ಲಿ ಮೂಡುಬಿದಿರೆಯಲ್ಲಿರುವ ಗುಡಿ ಕೈಗಾರಿಕೆ, ಫ್ಯಾಕ್ಟರಿ, ಮೆಸ್ಕಾಂ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಗಳಿಗೆ ಕರೆದೊಯ್ದು, ಅಲ್ಲಿನ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಸಹಕರಿಸಲಾಗುವುದು ಎಂದು ತಿಳಿಸಿದರು.

ಶಾಲಾ ಶಿಕ್ಷಕಿ ಭಾರತಿ, ಶಿಕ್ಷಕ ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಹಾಗೂ ಗಜಾನನ ಮರಾಠೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News