ಐಐಟಿ ಮದ್ರಾಸ್ ನಲ್ಲಿ ಆರೆಸ್ಸೆಸ್ ಶಾಖೆ : ವಿದ್ಯಾರ್ಥಿ ಅಭಿನವ್ ಸೂರ್ಯ ದೂರು

Update: 2016-08-12 15:47 GMT

ಚೆನ್ನೈ, ಆ.12  : ಪ್ರಚೋದನಕಾರಿ, ದ್ವೇಷ ಕಾರುವ ಭಾಷಣ ಹಾಗು ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ಮೇಜರ್ ಜನರಲ್ ಜಿ.ಡಿ. ಬಕ್ಷಿ ಅವರು ಇತ್ತೀಚಿಗೆ ಐಐಟಿ - ಮದ್ರಾಸ್ ನಲ್ಲಿ ವಾರ್ಷಿಕ ಉಪನ್ಯಾಸದ ವಿರುದ್ಧ ಕಾಲೇಜಿನ ವಿದ್ಯಾರ್ಥಿ ಅಭಿನವ್ ಸೂರ್ಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ಜೊತೆಗೆ ಇಂತಹ ವಿಭಜನಕಾರಿ ತತ್ವಗಳನ್ನೇ ಪ್ರತಿಪಾದಿಸುವ ಉಪನ್ಯಾಸಕರನ್ನು ಕಾಲೇಜಿಗೆ ಆಹ್ವಾನಿಸುತ್ತಿದ್ದು ಕಾಲೇಜಿನೊಳಗೆ ಒಂದು ' ಆರೆಸ್ಸೆಸ್ ಬೌದ್ಧಿಕ ಶಾಖೆ' ಆಗಿರುವ ಅಪಾಯ ಕಾಣುತ್ತಿದೆ. ಹಲವು ಪ್ರಾಧ್ಯಾಪಕರು ಇದಕ್ಕೆ ಬೆಂಬಲ ನೀಡುತ್ತಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಭಿನವ್ ಹೇಳಿದ್ದಾರೆ. 

ಪಾಕಿಸ್ತಾನದ ವಿರುದ್ಧ ದ್ವೇಷ ಕಾರುವ, ಕಪಟ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮೇ. ಜ. ಬಕ್ಷಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹಾಗು ಅದಕ್ಕಾಗಿ ಜೀವದಾನ ನೀಡಿದವರನ್ನು ಅವಮಾನಿಸಿದ್ದಾರೆ. " ಇಂಡಿಯನ್ ಆರ್ಮಿಯಲ್ಲಿದ್ದ ಭಾರತೀಯ ಸೈನಿಕರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಉಳಿದಂತೆ ಅಹಿಂಸೆಯ ಹೆಸರಲ್ಲಿ ನಡೆದದ್ದು ನಾನ್ಸೆನ್ಸ್ " ಎಂದು ಬಕ್ಷಿ ಅವಮಾನಿಸಿದ್ದಾರೆ. "ನಮ್ಮ ಪೀಳಿಗೆ ಪಾಕಿಸ್ತಾನವನ್ನು ಎರಡು ಭಾಗ ಮಾಡಿದೆ. ನೀವು ಅದನ್ನು ನಾಲ್ಕು  ಮಾಡಿ. ಆಗ ಮಾತ್ರ ನಾವು ನೆಮ್ಮದಿಯಿಂದ ಬದುಕಬಹುದು" ಎಂದು ಬಕ್ಷಿ ಹೇಳಿದ್ದಾರೆ. ಕಾಶ್ಮೀರದಲ್ಲಿ ನಾಗರೀಕರ ವಿರುದ್ಧ ಪೆಲ್ಲೆಟ್ ಗನ್ ಗಳನ್ನು ಬಳಸುವುದನ್ನು ಬಕ್ಷಿ ಸಮರ್ಥಿಸಿದ್ದಾರೆ. ಆಗ ಕೆಲವು ವಿದ್ಯಾರ್ಥಿಗಳು ಇದನ್ನು ವಿರೋಧಿಸಿದರು. ಆಗ ಬಕ್ಷಿಯನ್ನು ಬೆಂಬಲಿಸುವ ವಿದ್ಯಾರ್ಥಿಗಳು ಹಿಂಸಾತ್ಮಕವಾಗಿ ವರ್ತಿಸಿ ಇಷ್ಟವಿಲ್ಲದವರು ಹೊರಗೆ ಹೋಗಿ ಎಂದು ಹೇಳಿದ್ದಾರೆ ಎಂದು ಅಭಿನವ್ ದೂರಿದ್ದಾರೆ. ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದ್ದು 2014 ರಲ್ಲಿ ಮೋದಿ ಪ್ರಧಾನಿಯಾದಾಗ ಎಂದು ಅತಿಶಯೋಕ್ತಿಯ ಅಭಿಪ್ರಾಯವನ್ನು ಬಕ್ಷಿ ಹೊಂದಿದ್ದಾರೆ ಎಂದೂ ಅಭಿನವ್ ದೂರಿದ್ದಾರೆ.  

ಈ ಹಿಂದೆಯೂ ನಾನು ಒಪ್ಪದ ನಿಲುವು ವ್ಯಕ್ತಪಡಿಸುವ ಹಲವರನ್ನು ಉಪನ್ಯಾಸ ನೀಡಲು ಆಹ್ವಾನಿಸಲಾಗಿತ್ತು. ಆದರೆ ಬಕ್ಷಿಯದ್ದು ಕೇವಲ ಭಿನ್ನಾಭಿಪ್ರಾಯದ ಭಾಷಣವಲ್ಲ , ಅದು ಅಪಾಯಕಾರಿ ದ್ವೇಷ ಭಾಷಣ ಎಂದು ಅಭಿನವ್ ದೂರಿದ್ದಾರೆ ಹಾಗು ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಐಐಟಿ ಮದ್ರಾಸ್ ನ ಹಿಂದುತ್ವ ಪ್ರೀತಿಯನ್ನು ವಿದ್ಯಾರ್ಥಿಗಳು ವಿರೋಧಿಸಿದ್ದು ಇದೇ ಮೊದಲಲ್ಲ. ಈ ಹಿಂದೆ  ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್  ಕಾಲೇಜಿನಲ್ಲಿ ಹಿಂದುತ್ವವಾದಿ ಪ್ರಾಧ್ಯಾಪಕ ರಾಜೀವ್ ಮಲ್ಹೋತ್ರ ಇಂಡಾಲಜಿ ಸಮಾವೇಶ ನಡೆಸಿದ್ದನ್ನು ವಿರೋಧಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News