×
Ad

ಆ. 13 ಮತ್ತು 14ರಂದು ಮುಲ್ಕಿಯಲ್ಲಿ ತುಳು ಸಮ್ಮೇಳನ

Update: 2016-08-12 21:58 IST

ಮುಲ್ಕಿ, ಆ. 12: ಮುಲ್ಕಿ ತುಳು ಸಮ್ಮೇಳನದ ಸಂಯೋಜನೆಂುಲ್ಲಿ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ನಾಲ್ಕನೆ ವರ್ಷದ ಸವಿನೆನಪಿಗಾಗಿ ಮುಲ್ಕಿಯಲ್ಲಿ ಆಗಸ್ಟ್ 13 ಮತ್ತು 14ರಂದು ಎರಡು ದಿನಗಳ ಕಾಲದಲ್ಲಿ ‘ತುಳು ಐಸಿರದ ಐಸ್ರ’ ಎಂಬ ಹೆಸರಿನಲ್ಲಿ ಬಪ್ಪನಾಡು ಕ್ಷೇತ್ರದ ವಠಾರದಲ್ಲಿ ತುಳು ಸಮ್ಮೇಳನವನ್ನು ಸಂಯೋಜಿಸಲಾಗಿದೆ.

ಮುಂಬೈನ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಆ.13ರಂದು ತುಳುವೆರೆ ದಿಬ್ಬಣದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮ್ಮೇಳನಾಧ್ಯಕ್ಷರ ಆಕರ್ಷಕ ಮೆರವಣಿಗೆ ನಡೆಯಲಿದ್ದು, ದಿಬ್ಬಣಕ್ಕೆ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿಸ್ವಾಮೀಜಿ ಚಾಲನೆ ನೀಡುವರು.

ತುಳುವ ಐಸಿರಿದ ಐಸ್ರ ತುಳು ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಉದ್ಘಾಟನಾ ಕಾರ್ಯಕ್ರಮದ ನಂತರ ಪಾರಿ-ಪಾಡ್ದನ, ಸಂಧಿ-ಭೀರ, ಸೆಬಿಸವಾಲ್, ವಣಸ್ ತೆನಸ್‌ದ ಪೊರ್ತು, ಅರು ಪತ್ತಿ ತುಳು ಬಾಸೆ ಗೋಷ್ಠಿ-1ರಲ್ಲಿ ಡಿಜಿಟಲ್ ಮೀಡಿಯಾದಲ್ಲಿ ತುಳು ವಿಕಿಪಿಡಿಯ, ಶಾಲಾ ಮಕ್ಕಳಿಂದ ತೆಲಿಕೆ-ನಲಿಕೆ, ಗೋಷ್ಠಿ-2ರಲ್ಲಿ ಮುಂಬೈಯಲ್ಲಿ ತುಳು ಬಾಸೆದ ಬುಲೆಚ್ಚಿಲ್ ನಡೆಯಲಿದೆ. ಕಾವೂರು ಬಂಟರ ಸಂಘದಿಂದ ಜಾನಪದ ತುಳು ನಲಿಕೆಯನ್ನು ಪ್ರದರ್ಶಿಸಲಿದ್ದಾರೆ. ಗೋಷ್ಟಿ-3ರಲ್ಲಿ ತುಳು ಬಾಷೆ-ನೆಲ-ನೀರು ವಿಷಯದಲ್ಲಿ ನಡೆಯಲಿದೆ. ನಾಗೇಶ್ ಬಪ್ಪನಾಡು ಬಳಗದಿಂದ ವಾದ್ಯ ಗೋಷ್ಠಿ ನಡೆಯಲಿದೆ. ಈ ಸಂದರ್ಭ ತುಳು ಸಿನಿಮಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಹಿರಿಯರನ್ನು ಸನ್ಮಾನಿಸಲಾಗುವುದು, 2015ರಲ್ಲಿ ಬಿಡುಗಡೆಯಾದ ತುಳು ಸಿನಿಮಾದ ವಿವಿಧ ವಿಭಾಗಗಳ ಟೈಮ್ಸ್ ಆಫ್ ಕುಡ್ಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳು ರಂಗದ-ರಂಗುಲು ಕಾರ್ಯಕ್ರಮವನ್ನು ಭೋಜರಾಜ್ ವಾಮಂಜೂರು ಹಾಗೂ ಅರವಿಂದ ಬೋಳಾರ್ ನಡೆಸಿಕೊಡಲಿದ್ದಾರೆ. ಹಾಗೂ ಸೋಮೇಶ್ವರದ ಯಕ್ಷಗಾನ ಕೇಂದ್ರ ಕಲಾಗಂಗೋತ್ರಿಯಿಂದ ಕುಡಿಯನ ಕೊಂಬಿರೆಲ್ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಆಗಸ್ಟ್ 14ರಂದು ಬೆಳಗ್ಗೆ ತುಳು ಸಿನಿಮಾ ಪದರಂಗಿತ ಹಾಗೂ ವಿಶೇಷ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಾನಂಪಾಡಿಯ ಮಹಿಳಾ ಮಂಡಲ ಹಾಗೂ ಮುಲ್ಕಿ ಯುವವಾಹಿನಿ ಕಲಾವಿದರಿಂದ ತುಳುವರ ಆಚರಣೆ-ನಲಿಕೆ, ಟೈಮ್ಸ್ ಆಫ್ ಕುಡ್ಲಾ ಪತ್ರಿಕಾ ಅಂಕಣಗಾರರ ಗೌರವ, ಸಾಂಸ್ಕೃತಿಕ ಕಾರ್ಯಕ್ರಮದ ಬಹುಮುಖ ಪ್ರತಿಭೆ ತುಳು ಸಿರಿ ಪ್ರಶಸ್ತಿಯನ್ನು ಅದ್ವಿತಾ ಶೆಟ್ಟಿಯವರಿಗೆ ನೀಡಿ ಗೌರವಿಸಲಾಗುವುದು.

ಗೋಷ್ಠಿ-3ರಲ್ಲಿ ಶಾಲೆಯಲ್ಲಿ ಮೂರನೆ ಭಾಷೆಯಾಗಿ ತುಳು ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ. ಡಾ.ಗಣನಾಥ್ ಶೆಟ್ಟಿ ಎಕ್ಕಾರ್‌ರಿಂದ ತುಳುವ ಗೊಬ್ಬುಲು, ಹಾಗೂ ಸುರತ್ಕಲ್ ಬಂಟರ ಸಂಘ ಮತ್ತು ಮುಲ್ಕಿ ಯುವವಾಹಿನಿಯ ಕಲಾವಿದರಿಂದ ತುಳುವರೆ ಆಚರಣೆ ನಡೆಯಲಿದೆ. ಗೋಷ್ಠಿ-4ರಲ್ಲಿ ತುಳು ಆರಾಧನೆ ಮತ್ತು ಆಚರಣೆ, ಸಸಿಹಿತ್ಲು ಯುವಕ ಮಂಡಲದ ಜಾನಪದ ನಲಿಕೆ ಪ್ರದರ್ಶನ ನಡೆಯಲಿದೆ. ಹಿರಿಯ-ಕಿರಿಯ ಸಾಹತ್ಯಾಸಕ್ತರಿಂದ ಚುಟುಕು ಕವಿಗೋಷ್ಠಿ, ಉಡುಪಿಯ ಶ್ರೀ ಕ್ಷೇತ್ರ ಅಂಬಲಪಾಡಿಯ ಕಲಾ ತಂಡದಿಂದ ತುಳುನಾಡಿನ ಡೋಲು ಪ್ರದರ್ಶನ ನಡೆಯಲಿದೆ.

ಸಮಾರೋಪ ಸಮಾರಂಭವನ್ನು ಸಮ್ಮೇಳನಾಧ್ಯಕ್ಷೆ ಡಾ.ಸುನೀತ ಎಂ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಬೈರಾಸ್ ಭಾಸ್ಕರೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತುಳು ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ, ಕಾರ್ಯಾಧ್ಯಕ್ಷ ಚಂದ್ರಶೇಖರ ಸುವರ್ಣ, ಪ್ರಧಾನ ಸಂಚಾಲಕ ಎಸ್.ಆರ್.ಬಂಡಿಮಾರ್ ಮತ್ತು ಸಂಚಾಲಕ ವಾಮನ ಇಡ್ಯಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News