×
Ad

ಕೇರಳದ ಚಿನ್ನ ಪ್ರಿಯರಿಗೆ ಮಹತ್ವದ ಸಂದೇಶ ನೀಡಿದ ಸಹ್ಲಾ

Update: 2016-08-12 22:39 IST

ಮಲಪ್ಪುರಂ, ಆ. 12  : ಕೇರಳದ ಮುಸ್ಲಿಂ ಮದುಮಗಳೆಂದರೆ ಹೆಚ್ಚಿನವರಿಗೆ ಕಣ್ಣ ಮುಂದೆ ಬರುವುದು ರಾಶಿ ಚಿನ್ನಾಭರಣಗಳನ್ನು ಹೇರಿಕೊಂಡು ನಿಂತವಳು. ಏಕೆಂದರೆ ಇಲ್ಲಿನ  ಹೆಚ್ಚಿನ ಸ್ಥಿತಿವಂತರು ಮದುವೆ ಸಂದರ್ಭದಲ್ಲಿ ಮದುಮಗಳನ್ನು ಚಿನ್ನದಲ್ಲಿ ಮುಳುಗಿಸಿಬಿಡುವುದನ್ನು ' ಕಡ್ಡಾಯ ರಿವಾಜು ' ಎಂಬಂತೆ ಪಾಲಿಸಿಕೊಂಡು ಬಂದಿದ್ದಾರೆ. ಇದು ಹೊರೆಯಾಗಿ ಪರಿವರ್ತನೆಯಾಗಿ ಮದುವೆಯಾಗಲು ಸಾಲ ಸೋಲ ಮಾಡಿ ಹೈರಾಣಾಗುವುದು ಸಾಮಾನ್ಯ.

ಆದರೆ ಆಗಸ್ಟ್ 11 ರಂದು ಇಲ್ಲಿ ನಡೆದ ಮದುವೆ ಸಂಪೂರ್ಣ ಭಿನ್ನವಾಗಿತ್ತು. ಏಕೆಂದರೆ, ಈ ಮದುವೆಯ ವಧುವಿಗೆ ವಧುದಕ್ಷಿಣೆ ( ಮಹರ್ )ಯಾಗಿ ವರ ಚಿನ್ನವನ್ನೇ ಹಾಕಲಿಲ್ಲ ! ಹೌದು, ಚಿನ್ನವನ್ನೇ ನೀಡದೆ ಮದುವೆಯಾದ ಕೆರಳದ  ಪ್ರಪ್ರಥಮ  ವರ ಅನೀಸ್ ನಾಡೋಡಿ ! ಆದರೆ ಆತನಿಗೆ ಯಾವುದೇ ಖರ್ಚು ಮತ್ತು ಶ್ರಮ ಆಗಿಲ್ಲ ಎನ್ನುವಂತಿಲ್ಲ. ಆತ ಇಸ್ಲಾಮಿ ನೀತಿ ನಿಯಮದ ಪ್ರಕಾರ ಮಹರ್ ನೀಡಿಯೇ ಮದುವೆಯಾಗಿದ್ದಾನೆ. ಆದರೆ ಆತ ನೀಡಿದ್ದು ವಧುವಿನ ಬೇಡಿಕೆಯಂತೆ ಆಕೆ ಕೇಳಿದ ಆಯ್ದ 50 ಪುಸ್ತಕಗಳನ್ನು ! 

ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಹ್ಲಾ ನೇಚಿಯಿಲ್ ವಿಭಿನ್ನವಾಗಿ ಮದುವೆಯಾಗುವ ಮೂಲಕ ತಮ್ಮ ಸಮುದಾಯಕ್ಕೆ ಮಹತ್ವದ ಸಂದೇಶವೊಂದನ್ನು ನೀಡಿದ್ದಾಳೆ. " ಇಸ್ಲಾಮಿನಲ್ಲಿ ವಧು ತನಗೆ ಬೇಕಾದ್ದನ್ನು ಕೇಳಬಹುದು ಮತ್ತು ಅದನ್ನು ವರ ಈಡೇರಿಸಲೇಬೇಕು. ಮತ್ತು ಎರಡು ಕುಟುಂಬಗಳ ನಡುವೆ ಚಿನ್ನ ವಿನಿಮಯವಾಗದೆಯೂ ಮದುವೆ ಆಗಲು ಸಾಧ್ಯ. ಈ ಎರಡೂ ವಿಷಯಗಳನ್ನು ಜನರಿಗೆ ತಲುಪಿಸಲು ನಾನು ಹೀಗೆ ಮಾಡಿದೆ " ಎನ್ನುತ್ತಾಳೆ ಸಹ್ಲಾ . 
ಮೊದಮೊದಲು ಎರಡೂ ಕುಟುಂಬದವರು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಸಹ್ಲಾ ಳ ಬೇಡಿಕೆ ಇಸ್ಲಾಮಿಗೆ ವಿರುದ್ಧವಾಗಿರಲಿಲ್ಲ. ಆದ್ದರಿಂದ ನಿಧಾನವಾಗಿ ಎಲ್ಲರೂ ಒಪ್ಪಿದರು. 

ಸಹ್ಲಾ ಳ ಬೇಡಿಕೆಗೆ ವರ ಅನೀಸ್ ಸಂಪೂರ್ಣ ಬೆಂಬಲ ನೀಡಿದ್ದಾನೆ. " ಮಹರ್ ವಧುವಿನ ಹಕ್ಕು. ಅದು ವರನ ಧಾರಾಳತನ ತೋರಿಸುವ ಪ್ರದರ್ಶನವಲ್ಲ " ಎಂದು ಅನೀಸ್ ಹೇಳಿದ್ದಾರೆ. ಆದರೆ ಈ ವಿಶಿಷ್ಟ ಮಹರ್ ಅನ್ನು ನೀಡುವುದು ಅನೀಸ್ ಗೆ ಅಷ್ಟು ಸುಲಭವಾಗಿರಲಿಲ್ಲ. ಸಹ್ಲಾ ಅತ್ಯಂತ ಆಯ್ಡ 50 ಪುಸ್ತಕಗಳ ಪಟ್ಟಿಯನ್ನು ನೀಡಿದ್ದಳು. ಅದಕ್ಕಾಗಿ ಬೆಂಗಳೂರಿಗೆ ಹೋದ ಅನೀಸ್ ಅಲ್ಲಿನ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ಸಾಕಷ್ಟು ಹುಡುಕಿ ಈ ಎಲ್ಲ ಪುಸ್ತಕಗಳನ್ನು ' ಸಂಪಾದಿಸಿ' ತಂದು ಮಹರ್ ನೀಡಿದ್ದಾನೆ. ರಾಜಕೀಯ, ಇಸ್ಲಾಮಿ ಸ್ತ್ರೀವಾದ ಇತ್ಯಾದಿ ವಿಷಯಗಳ ಕುರಿತ ಪುಸ್ತಕಗಳ ಪಟ್ಟಿ ನೀಡಿದ್ದಳು ಸಹ್ಲಾ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News