ಮೂಳೆಗಳ ಡಿಎನ್‌ಎ ಪರೀಕ್ಷೆಗೆ ಪೊಲೀಸರಿಂದ ಸಿದ್ಧತೆ

Update: 2016-08-12 18:02 GMT

ಉಡುಪಿ, ಆ.12: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಈಗಾಗಲೇ ಹೊಳೆಯಲ್ಲಿ ದೊರೆತಿರುವ ಮೂಳೆಗಳ ಡಿಎನ್‌ಎ ಪರೀಕ್ಷೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಆ.10ರಂದು ಪಳ್ಳಿ ಬಳಿ ಹೊಳೆಯಲ್ಲಿ ಪತ್ತೆಯಾದ ಮೂಳೆಗಳು ಮೃತ ಭಾಸ್ಕರ ಶೆಟ್ಟಿಯವರದ್ದೇ ಎಂಬುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಪೊಲೀಸರು ಡಿಎನ್‌ಎ ಪರೀಕ್ಷೆಗಾಗಿ ಮೊದಲು ಭಾಸ್ಕರ ಶೆಟ್ಟಿಯ ಸಂಬಂಧಿಕರ ಡಿಎನ್‌ಎಯನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಕೋರ್ಟ್ ಅನುಮತಿ ತೆಗೆದುಕೊಳ್ಳ ಬೇಕು. ಆ ಪ್ರಕ್ರಿಯೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಮುಂದೆ ಇದನ್ನು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಆ ಮೂಳೆ ಭಾಸ್ಕರ್ ಶೆಟ್ಟಿಯವರದ್ದೇ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಲಾಗುತ್ತದೆ.

ಕೊಲೆ ಪ್ರಕರಣದ ಮಹತ್ವದ ಸಾಕ್ಷಗಳನ್ನು ಕಲೆಹಾಕಲು ಮೂವರು ಆರೋಪಿಗಳನ್ನು ಕೆಲವು ಸ್ಥಳಗಳಿಗೆ ಪೊಲೀಸರು ಒಟ್ಟಿಗೆ ಕರೆದೊಯ್ಯಲ್ಲಿದ್ದಾರೆ. ಅದಕ್ಕಾಗಿ ಇದೀಗ ಮೂವರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಭಾಸ್ಕರ್ ಶೆಟ್ಟಿಯನ್ನು ಕೊಲೆಗೈದು ಮೃತದೇಹ ವನ್ನು ಇಟ್ಟಿಗೆಯನ್ನು ಇರಿಸಿ ಹೋಮಕುಂಡವನ್ನು ರಚಿಸಿ ಸುಟ್ಟು ಹಾಕಿರುವುದು ಈಗಾಗಲೇ ದೃಢಪಟ್ಟಿದೆ. ಆರಂಭದಲ್ಲಿ ಹೆಣ ಸುಟ್ಟ ವಿಷಯ ತನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದ ನಿರಂಜನ್ ಭಟ್‌ನ ತಂದೆ ಶ್ರೀನಿವಾಸ ಭಟ್, ಪೊಲೀಸರ ತೀವ್ರ ವಿಚಾರಣೆ ಸಂದರ್ಭದಲ್ಲಿ ಹೆಣ ಸುಟ್ಟಿರುವ ಮಾಹಿತಿ ತನಗೆ ತಿಳಿದಿತ್ತು ಎಂಬುದಾಗಿ ಬಾಯಿಬಿಟ್ಟಿ ದ್ದಾರೆ ಎನ್ನಲಾಗಿದೆ. ಹೆಣ ಸುಟ್ಟ ಬಳಿಕ ಅದರ ಅವಶೇಷಗಳನ್ನು ಕಾರಿನಲ್ಲಿ ಸಾಗಿಸಲು ಚಾಲಕ ರಾಘವೇಂದ್ರ ಸಹಕಾರ ನೀಡಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ನೂತನ ಎಸ್ಪಿ ಕೆ.ಟಿ.ಬಾಲಕೃಷ್ಣ ಈ ಪ್ರಕರಣದ ತನಿಖೆಗೆ ನಿಯೋಜಿಸಲಾಗಿರುವ ವಿಶೇಷ ತಂಡದಲ್ಲಿರುವ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಹಾಗೂ ಬೆಂಗಳೂರಿನ ಡಿಎನ್‌ಎ ತಜ್ಞರೊಬ್ಬರು ಪ್ರಕರಣದ ತನಿಖಾಧಿಕಾರಿ ಸುಮನಾರಿಗೆ ಸಹಕಾರ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News