ಬೀಫ್ ರಫ್ತು ಸಂಪೂರ್ಣ ನಿಷೇಧಿಸಿ: ಮುಸ್ಲಿಂ ಸಂಘಟನೆಗಳ ಆಗ್ರಹ
ಹೊಸದಿಲ್ಲಿ,ಆ.13: ಗೋರಕ್ಷಕರ ದಾಳಿಯನ್ನು ಖಂಡಿಸಿ, ಸಮಸ್ಯೆಯ ತೀವ್ರತೆಯನ್ನು ಬಿಂಬಿಸುವ ಸಲುವಾಗಿ ಇತ್ತೆಹಾದ್-ಇ-ಮಿಲ್ಲತ್ ಕೌನ್ಸಿಲ್ (ಐಎಂಸಿ) ವಿಚಾರ ಸಂಕಿರಣವೊಂದನ್ನು ಏರ್ಪಡಿಸಿ, ದೇಶದಿಂದ ಬೀಫ್ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿದೆ. ಅಂತೆಯೇ ಜಾನುವಾರುಗಳ ಮೇಲಿನ ಕ್ರೌರ್ಯವನ್ನು ತಡೆಯುವ ಸಲುವಾಗಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದೆ.
ಬೀಫ್ ಎಂದರೆ ವಾಸ್ತವವಾಗಿ ಹಸುವಿನ ಮಾಂಸ. ಆದರೆ ಎಮ್ಮೆ ಮಾಂಸವನ್ನು ರಫ್ತು ಮಾಡುವಾಗ ಕೂಡಾ ಈ ಪದವನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ, ಈ ಪದದ ತಪ್ಪುಬಳಕೆಯನ್ನು ನಿಲ್ಲಿಸಲು ಸ್ಪಷ್ಟತೆ ತರಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂಬಂಧ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಕಿಕ್ಕಿರಿದು ಸೇರಿದ್ದ, ಮುಸ್ಲಿಂ ಹಾಗೂ ದಲಿತರು ಆಂಗೀಕರಿಸಿದ ನಿರ್ಣಯವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ರೂಪದಲ್ಲಿ ಸಲ್ಲಿಸಲಾಗಿದೆ. ಈ ಬೇಡಿಕೆಗಳನ್ನು ಸರಕಾರ ಈಡೇರಿಸದಿದ್ದರೆ, ಈ ಬಗ್ಗೆ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟಕರು ಪ್ರಕಟಿಸಿದ್ದಾರೆ.
"ಗೋಸಂರಕ್ಷಣೆ, ಗೋಮಾಂಸ ಭಕ್ಷಣೆ, ಭಯೋತ್ಪಾದನೆ, ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಮೇಲಿನ ದೌರ್ಜನ್ಯ, ಹತ್ತಿಕ್ಕುವ ಹುನ್ನಾರ ಹಾಗೂ ತಾರತಮ್ಯವನ್ನು ವಿರೋಧಿಸುತ್ತೇವೆ. ದಾದ್ರಿಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಗೋಮಾಂಸ ಸೇವಿಸಿದ ಶಂಕೆಯ ಮೇಲೆ ವ್ಯಕ್ತಿಯೊಬ್ಬರನ್ನು ಹೊಡೆದು ಸಾಯಿಸಿದ ಬಳಿಕ ಗೋರಕ್ಷಕರ ದೌರ್ಜನ್ಯ ಹೆಚ್ಚಿದೆ" ಎಂದು ಐಎಂಸಿ ಪ್ರಕಟಣೆ ಹೇಳಿದೆ.
ಹಸು ಹಾಗೂ ಕರುವಿನ ಹತ್ಯೆಯನ್ನು ನಿಷೇಧಿಸಲಾಗಿದೆ. 29 ರಾಜ್ಯಗಳ ಪೈಕಿ 24 ರಾಜ್ಯಗಳು ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಮಸೂದೆಯ ಸಂವಿಧಾನ ಬದ್ಧತೆಯನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿಹಿಡಿದಿದೆ. ಆದರೆ ಪಶ್ಚಿಮ ಬಂಗಾಳ, ಕೇರಳ, ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ಹಾಗೂ ಸಿಕ್ಕಿಂಗಳಲ್ಲಿ ಗೋಹತ್ಯೆ ಮೇಲೆ ನಿರ್ಬಂಧಗಳಿಲ್ಲ" ಎಂದು ವಿವರಿಸಿದೆ.