ನಕಲಿ ಕ್ರೆಡಿಟ್ ಕಾರ್ಡ್ ಮೂಲಕ ಲಕ್ಷಾಂತರ ರೂ. ವಂಚಿಸಿದ ಖದೀಮರು ಪೊಲೀಸರ ಬಲೆಗೆ

Update: 2016-08-13 03:30 GMT

ಕಾಸರಗೋಡು, ಆ.13: ನಕಲಿ ಕ್ರೆಡಿಟ್ ಕಾರ್ಡ್ ರಚಿಸಿ ಹಲವಾರು ಮಂದಿಯ ಬ್ಯಾ೦ಕ್ ಖಾತೆಯಿಂದ  ಲಕ್ಷಾಂತರ ರೂ . ಎಗರಿಸಿ ವಂಚಿಸಿದ  ಪ್ರಕರಣಕ್ಕೆ ಸಂಬಂಧಪಟ್ಟಂತೆ  ಪ್ರಮುಖ ಆರೋಪಿ ಸೇರಿದಂತೆ ಆರು ಮಂದಿಯನ್ನು  ಪುಣೆ ಮತ್ತು ಕಾಸರಗೋಡಿನಿಂದ ತನಿಖಾ ತಂಡಗಳು ವಶಕ್ಕೆ ತೆಗೆದುಕೊಂಡಿದೆ.

ಕಾಸರಗೋಡು ತಳಂಗರೆಯ ನ್ಯುಮಾನ್ (೨೪) ಸೇರಿದಂತೆ ನಾಲ್ವರು ಪುಣೆಯಿಂದ, ವಿಟ್ಲದ ಬಿ. ಬಷೀರ್  ಮತ್ತು ಎನ್. ಹಂಝನನ್ನು ಕಾಸರಗೋಡಿನಿಂದ ವಶಕ್ಕೆ ತೆಗೆದು ಕೊಂಡಿದೆ. ಜೊತೆಗೆ ನಕಲಿ ಕ್ರೆಡಿಟ್ ಕಾರ್ಡ್  ತಯಾರಿಸುವ ಯಂತ್ರ,  ಕ್ರೆಡಿಟ್  ಕಾರ್ಡ್  ಸ್ವೈಪಿಂಗ್  ಯಂತ್ರ,  ನೂರಕ್ಕೂ ಅಧಿಕ ನಕಲಿ ಕ್ರೆಡಿಟ್ ಕಾರ್ಡ್ ಮತ್ತು   ಕಾರನ್ನು ವಶಕ್ಕೆ ತೆಗೆದುಕೊಂಡಿದೆ.

ಪ್ರಕರಣದ ಪ್ರಮುಖ ಸೂತ್ರಧಾರ ಕಾಸರಗೋಡಿನ  ಮುಹಮ್ಮದ್ ಸಾಬಿದ್ ( ೨೯) ನನ್ನು ಕೆಲ ದಿನಗಳ ಹಿಂದೆ  ಕೊಚ್ಚಿಯಲ್ಲಿ ಬಂಧಿಸಲಾಗಿತ್ತು.

ದುಬೈಯಲ್ಲಿ ಉದ್ಯೋಗದಲ್ಲಿದ್ದ ನ್ಯುಮಾನ್  ನೇತೃತ್ವದಲ್ಲಿ  ವಂಚನೆ   ನಡೆದಿದೆ  ಎಂದು ಪೊಲೀಸರು ತಿಳಿಸಿದ್ದಾರೆ. ದುಬೈಯ  ಸೂಪರ್ ಮಾರ್ಕೆಟ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ  ನೂರಾರು ಗ್ರಾಹಕರ  ಕ್ರೆಡಿಟ್ ಕಾರ್ಡ್ ಗಳ ಮಾಹಿತಿಯನ್ನು ಸೋರಿಕೆ ಮಾಡಿ  ನಕಲಿ ಕಾರ್ಡ್  ತಯಾರಿಸಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಸೂಪರ್ ಮಾರ್ಕೆಟ್  ಕಾರ್ಡ್  ಸ್ವೈಪ್  ಮೆಷಿನ್ ಗೆ   ಜೋಡಿಸಿ  ಇನ್ನೊಂದು ಮೆಷಿನ್ ಅಳವಡಿಸಿ    ಕ್ರೆಡಿಟ್ ಕಾರ್ಡ್ ಗಳ ಮಾಹಿತಿಗಳನ್ನು ಕಲೆ ಹಾಕಿದ್ದರು. ಗ್ರಾಹಕರು  ಸಾಮಗ್ರಿಗಳು  ಖರೀದಿಸಿದ ಬಳಿಕ  ನೈಜ ಮೆಷಿನ್ ನಲ್ಲಿ ಸ್ವೈಪ್ ಮಾಡುವ ಸಂದರ್ಭದಲ್ಲಿ  ಅದರಲ್ಲಿನ ಮಾಹಿತಿಗಳು  ಎರಡನೆ ಯಂತ್ರದಲ್ಲಿ ದಾಖಲಾಗುತ್ತಿದ್ದವು. ಈ ಮಾಹಿತಿ ಬಳಸಿ  ನಕಲಿ ಕ್ರೆಡಿಟ್ ಕಾರ್ಡ್ ಗಳನ್ನು ತಯಾರಿಸಿದ್ದರು. ಡಿಸ್ಕವರ್  ಎಂಬ ಅಮೆರಿಕಾದ ಖಾಸಗಿ  ಬ್ಯಾ೦ಕ್ ನ ಹೆಸರಲ್ಲಿ ನಕಲಿ  ಕ್ರೆಡಿಟ್ ಕಾರ್ಡ್ ಬಳಸಲಾಗಿತ್ತು.

ದುಬೈನಿಂದ ಊರಿಗೆ ಬಂದ  ಬಳಿಕ ನ್ಯುಮಾನ್ ಕಾಸರಗೋಡು , ಎರ್ನಾಕುಲಂ  ಮೊದಲಾದೆಡೆಗಳಲ್ಲಿ  ವಂಚನೆ ನಡೆಸಿದ್ದ. ಬಳಿಕ ಸಹಚರರ ಜೊತೆ ಪುಣೆಗೆ ತೆರಳಿ  ಅಲ್ಲಿ   ಐಷಾರಾಮಿ  ಹೋಟೆಲ್ ನಲ್ಲಿ  ವಾಸವಾಗಿದ್ದ.  ಈ ಬಗ್ಗೆ ಮಾಹಿತಿ ಪಡೆದ ತನಿಖಾ ತಂಡ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದು , ಇದರಂತೆ ವಶಕ್ಕೆ ತೆಗೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡಿನಲ್ಲಿ ಬಂಧಿತರಾದ ಬಿ.ಬಷೀರ್  ಮತ್ತು ಹಂಝ ಕ್ರೆಡಿಟ್ ಕಾರ್ಡ್ ತಯಾರಿಗೆ ನೆರವು ನೀಡಿದ್ದರು ಎನ್ನಲಾಗಿದೆ.

ಮುಂಬೈಯಲ್ಲೂ ವಂಚನೆಗೆ ತಂಡವು ಸಂಚು ರೂಪಿಸಿತ್ತು ಎನ್ನಲಾಗಿದೆ. ಹೆಚ್ಚಿನ ವಿಚಾರಣೆಯ ಬಳಿಕ ವಷ್ಟೇ ಪ್ರಕರಣ ಬೆಳಕಿಗೆ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News