×
Ad

ಮತ್ತೊಂದು ರಾಜಕೀಯ ಕಗ್ಗೊಲೆ: ಮುಸ್ಲಿಂ ಲೀಗ್ ಕಾರ್ಯಕರ್ತನ ಹತ್ಯೆ

Update: 2016-08-13 11:25 IST

ನಾದಪುರಂ, ಆ.13: ತೂಣೇರಿ ವೆಳ್ಳೂರಿನಲ್ಲಿ ಹತ್ಯೆಯಾಗಿದ್ದ ಡಿವೈಎಫ್‌ಐ ಕಾರ್ಯಕರ್ತ ಶಿಬು ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಆರೋಪಿಯೊಬ್ಬನನ್ನು ತಲವಾರಿನಿಂದ ಹಲ್ಲೆಗೈದು ಕೊಲೆನಡೆಸಿದ ಘಟನೆ ವರದಿಯಾಗಿದೆ. ಇರಿತಕ್ಕೊಳಗಾಗಿ ಮೃತನಾದ ವ್ಯಕ್ತಿಯನ್ನು ಮುಸ್ಲಿಂ ಲೀಗ್ ಕಾರ್ಯಕರ್ತ ಅಸ್ಲಂ(22) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಕಾರಿನಲ್ಲಿ ಬಂದ ತಂಡ ತಲವಾರಿನಿಂದ ಕೊಚ್ಚಿಹಾಕಿ ಪರಾರಿಯಾಗಿದೆ ಎನ್ನಲಾಗಿದ್ದು, ಕೂಡಲೇ ಅಸ್ಲಂರನ್ನು ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ರಾತ್ರಿ 9:30ಕ್ಕೆ ಆತ ಅಸು ನೀಗಿದ್ದಾರೆಂದು ವರದಿ ತಿಳಿಸಿದೆ.

   ನಿನ್ನೆ ಸಂಜೆ ಅಸ್ಲಂ ತನ್ನ ಗೆಳೆಯ ಶಾಫಿಯೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಸ್ಕೂಟರನ್ನು ಕೆಳಗುರುಳಿಸಿತ್ತು. ನಂತರ ಕಾರಿನಿಂದಿಳಿದ ತಂಡ ಶಾಫಿಗೆ ಏನೂ ಮಾಡದೆ ಅಸ್ಲಂನ ಮೇಲೆ ತಲವಾರು ಹಲ್ಲೆ ನಡೆಸಿದೆ. ಪರಿಣಾಮವಾಗಿ ಅಸ್ಲಂನ ಕೈ, ಕತ್ತು, ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅಸ್ಲಂರನ್ನು ಕೋಝಿಕ್ಕೋಡ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಡಿವೈಎಫ್‌ಐ ಕಾರ್ಯಕರ್ತ ಶಿಬು ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಕೋರ್ಟು ಖುಲಾಸೆ ಗೊಳಿಸಿದ್ದು, ಅವರೆಲ್ಲರೂ ಕೊಲೆ ಬೆದರಿಕೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ಮೂರನೆ ಆರೋಪಿ ಅಸ್ಲಂನನ್ನು ಕಣ್ಣೂರು ರಿಜಿಸ್ಟ್ರೇಶನ್ ಹೊಂದಿದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಕೊಚ್ಚಿಕೊಲೆಗೈದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News