ಮುಹಮ್ಮದ್ ಅಸ್ಲಂ ಕೊಲೆ ಪ್ರಕರಣದ ಆರೋಪಿಗಳ ವಿವರ ಲಭಿಸಿದೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್
ತಿರುವನಂತಪುರಂ,ಆ.13: ನಾದಾಪುರಂ ತೂಣೇರಿಯಲ್ಲಿ ಮುಸ್ಲಿಮ್ ಲೀಗ್ ಕಾರ್ಯಕರ್ತ ಮುಹಮ್ಮದ್ ಅಸ್ಲಂ ಕೊಲೆಯಾದ ಘಟನೆಗೆ ಸಂಬಂಧಿಸಿದ ಆರೋಪಿಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಘಟನೆ ದುರದೃಷ್ಟಕರವಾದುದು ಎಂದ ವಿಜಯನ್ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ಈ ನಡುವೆ, ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ನೇಮಿಸಲಾಗಿದೆ. ವಡಕರ ಎಎಸ್ಪಿ ಕುರುಪ್ ಸ್ವಾಮಿಯ ನೇತೃತ್ವದಲ್ಲಿ ಏಳು ಮಂದಿ ಪೊಲೀಸರ ತಂಡವನ್ನು ರೂಪೀಕರಿಸಲಾಗಿದ್ದು, ಕುಟ್ಯಾಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಹಿತ ಪೊಲೀಸಾಧಿಕಾರಿಗಳು ಈ ತಂಡದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಪಾತಕದ ಹಿಂದೆ ಸಿಪಿಐಎಂ ಇದೆ ಎಂದುಮುಸ್ಲಿಂ ಲೀಗ್ ಆರೋಪಿಸಿತ್ತಿದ್ದರೂ ಕೊಲೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಹೇಳಿಕೊಂಡಿದೆ ಎಂದು ವರದಿಯಾಗಿದೆ.
ನಿನ್ನೆ ನಾದಾಪುರಂ ಸಮೀಪ ಮುಹಮ್ಮದ್ ಅಸ್ಲಂರನ್ನು ತಲವಾರಿನಿಂದ ಕೊಚ್ಚಿ ಕೊಲೆಗೈಯಲಾಗಿತ್ತು. ತೂಣೇರಿ ಸಿಬಿನ್ ಕೊಲೆ ಪ್ರಕರಣದ ಮೂರನೆ ಆರೋಪಿಯಾಗಿದ್ದ ಅಸ್ಲಂರನ್ನು ನಂತರ ಕೋರ್ಟ್ ಆರೋಪಮುಕ್ತಗೊಳಿಸಿ ಖುಲಾಸೆಗೊಳಿಸಿತ್ತು. ಕೊಲೆಕೃತ್ಯವನ್ನು ವಿರೋಧಿಸಿ ವಡಗರ ತಾಲೂಕು ಯುಡಿಎಫ್ ಶನಿವಾರ ಹರತಾಳಕ್ಕೆ ಕರೆ ನೀಡಿದೆ. ಕೊಲೆಪಾತಕಿಗಳ ಮೊಬೈಲ್ ಫೋನ್ ಮತ್ತು ಇತರ ಸುಳಿವುಗಳು ಶುಕ್ರವಾರವೇ ಪೊಲೀಸರಿಗೆ ಲಭಿಸಿದೆ ಎನ್ನಲಾಗಿದ್ದು, ಇನೊವಾ ಕಾರಿನಲ್ಲಿ ಬಂದಿದ್ದ ಏಳು ಮಂದಿ ಅಸ್ಲಂರನ್ನು ಹತ್ಯೆಮಾಡಿದ್ದಾರೆಂದು ಪೊಲೀಸರಿಗೆ ಮಾಹಿತಿ ದೊರಕಿದೆ ಎಂದು ವರದಿತಿಳಿಸಿದೆ.