ಮೂವತ್ತೇ ನಿಮಿಷದಲ್ಲಿ ಚೆನ್ನೈಯಿಂದ ಬೆಂಗಳೂರಿಗೆ !
ಅಹ್ಮದಾಬಾದ್, ಆ.13: ಚೆನ್ನೈಯಿಂದ ಬೆಂಗಳೂರಿಗೆ ಮೂವತ್ತು ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ, ಅದು ಕೂಡ ವಿಶೇಷ ಹಳಿಯೊಂದರಲ್ಲಿ ಸಂಚರಿಸುವುದು ಸಾಧ್ಯವೇ? ವಿಮಾನಯಾನ ದರಕ್ಕಿಂತ ಕಡಿಮೆ ಖರ್ಚಿನಲ್ಲಿ ಇಂತಹ ಒಂದು ಪ್ರಯಾಣ ಸಾಧ್ಯವೇ ಎಂದು ಕೇಳಿದರೆ ಹಲವರು ನಕಾರಾತ್ಮಕ ಉತ್ತರ ನೀಡಬಹುದು.
ಆದರೆ ಇದು ಸಾಧ್ಯ ಎಂದು ಹೇಳುತ್ತಾರೆ ಹೆಚ್ ಟಿ ಟಿ ಎಂಬ ಲಾಸ್ ಏಂಜಲಿಸ್ ಮೂಲದ ಸ್ಟಾರ್ಟ್ -ಅಪ್ ಕಂಪೆನಿಯ ಮುಖ್ಯಸ್ಥ ಜೋಯೆಲ್ ಮೈಕೆಲ್. ಹೈಪರ್ ಲೂಪ್ ಟ್ರಾನ್ಸ್‌ಪೊರ್ಟೇಶನ್ ಟೆಕ್ನಾಲಜೀಸ್ ಎಂಬ ಹೆಸರಿನ ಈ ಸಂಸ್ಥೆಯು ಪ್ರಯಾಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಬಲ್ಲ ಟೆಸ್ಲಾ ಸ್ಥಾಪಕ ಇಲೋನ್ ಮಸ್ಕ್ ಎಂಬವರ ಪರಿಕಲ್ಪನೆಯ ದಿ ಹೈಪರ್ ಲೂಪ್ ನಿರ್ಮಿಸಲು ಸಜ್ಜಾಗಿದೆ.
ಹೈಪರ್ ಲೂಪ್ ರೈಲಿನಂತಹ ಒಂದು ಹೈಸ್ಪೀಡ್ ಪ್ರಯಾಣ ಸಾಧನವಾಗಿದ್ದು, ಇಲ್ಲಿ ಪ್ರಯಾಣಿಕರು ಭಾಗಶಃ ವ್ಯಾಕ್ಯೂಮ್ ಇರುವ ಪಾಡ್ ನೊಳಗೆ ಪ್ರಯಾಣಿಸಬೇಕಾಗುತ್ತದೆ. ಇಂತಹ ಒಂದು ವ್ಯಾಕ್ಯೂಮ್ ಟ್ಯೂಬ್ ಪ್ರತಿ ದಿನ 1.44 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಪ್ರಯಾಣದ ನಡುವೆ 40 ಸೆಕೆಂಡಿನ ವಿರಾಮಗಳಿರುತ್ತವೆ. ಸುಮಾರು 500 ಕಿ.ಮೀ. ದೂರದ ಪ್ರಯಾಣಕ್ಕೆ 30 ಡಾಲರ್ ಅಥವಾ ಸುಮಾರು 2,000 ರೂ. ಟಿಕೆಟ್ ದರ ಇರುವ ಸಾಧ್ಯತೆಯಿದೆ. ಈ ವಾಹನ ಗಂಟೆಗೆ ಅತ್ಯಧಿಕ 12,00 ಕಿ.ಮೀ. ವೇಗದಲ್ಲಿ ಪ್ರಯಾಣಿಸುವ ಅಂದಾಜಿದೆ.
ಪ್ರಸಕ್ತ ಹೆಚ್ ಟಿ ಟಿ ಕ್ಯಾಲಿಫೋರ್ನಿಯಾದ ಕ್ವೇ ಎಂಬಲ್ಲಿ ಐದು ಮೈಲು ಉದ್ದದ ಪರೀಕ್ಷಾ ಟ್ರ್ಯಾಕ್ ಒಂದನ್ನು ಸಿದ್ಧಪಡಿಸುತ್ತಿದ್ದು, ಇದು 2019 ರ ಸುಮಾರಿಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಮರುಬಳಕೆ ಮಾಡಬಲ್ಲ ಹಾಗೂ ಕೈನಟಿಕ್ ಎನರ್ಜಿ ಮೂಲಕ ಈ ವಾಹನ ಕಾರ್ಯನಿರ್ವಹಿಸಲಿದ್ದು ಇದು ಅದರ ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ.
ಈ ವರ್ಷದ ಆರಂಭದಲ್ಲಿ ಕಂಪೆನಿ ವಿಯೆನ್ನಾ, ಬ್ರಾಟಿಸ್ಲಾವ ಹಾಗೂ ಬುಡಾಪೆಸ್ಟ್ ನ ನಡುವೆ ಸಾಗುವ ಹೈಪರ್ ಲೂಪ್ ಲೈನ್ ಹಬ್ ನಿರ್ಮಾಣಕ್ಕೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಮೈಕೆಲ್ ಜೋಯೆಲ್ ಅವರು ಸಂಸ್ಥೆಯ ಸಿಒಒ ಆಗಿರುವ ಬಿಬೊಪ್ ಗ್ರೆಸ್ತಾ ಅವರೊಂದಿಗೆ ಮುಂದಿನ ವಾರ ಭೋಪಾಲ್ ನಗರದಲ್ಲಿ ನಡೆಯಲಿರುವ ಐ5 ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಭಾರತದಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಬಹುದೇ ಎಂಬ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಯೋಚಿಸುತ್ತಿದ್ದಾರೆ.