×
Ad

ಸಹಕಾರ ಸಂಘಗಳ ಮೂಲಕ ಆರ್‌ಟಿಸಿ ವಿತರಣೆಗೆ ಆಗ್ರಹ

Update: 2016-08-13 13:12 IST

ಮಂಗಳೂರು,ಆ.13: ರೈತರು ಹಾಗೂ ಸಾರ್ವಜನಿಕರು ತಮ್ಮ ಸ್ಥಿರಾಸ್ತಿಯ ದಾಖಲೆಗಾಗಿ ಪಹಣಿ ಪತ್ರ (ಆರ್‌ಟಿಸಿ)ಗಳನ್ನು ಪಡೆಯಲು ತಾಲೂಕು ಕೇಂದ್ರಗಳಿಗೆ ಅಲೆದಾಡಬೇಕಾಗಿದ್ದು, ರಾಜ್ಯ ಸರಕಾರವು ಇ ಸ್ಟಾಂಪಿಂಗ್ ಮಾದರಿಯಲ್ಲಿ ಆರ್‌ಟಿಸಿ ವಿತರಣೆಯನ್ನು ಸಹಕಾರ ಸಂಘಗಳ ಮೂಲಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ಎಂ.ಜಿ. ಪಾಟೀಲ್ ಆಗ್ರಹಿಸಿದ್ದಾರೆ.

ನಗರದ ಕ್ಯಾಂಪ್ಕೋ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಸ್ಟಾಂಪ್ ಪೇಪರ್‌ಗಳಿಗಾಗಿ ಸಾರ್ವಜನಿಕರು ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ಇದೀಗ ಸಹಕಾರ ಸಂಘಗಳು ಇ ಸ್ಟಾಂಪಿಂಗ್ ವ್ಯವಸ್ಥೆಯನ್ನು ಸಮಪರ್ಕವಾಗಿ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಆರ್‌ಟಿಸಿಗೂ ಸರಕಾರ ಅವಕಾಶ ಒದಗಿಸಬೇಕು ಎಂದರು.

1978ರ ಸೆಪ್ಟಂಬರ್ 15ರಂದು ಹಿರಿಯ ಸಹಕಾರಿ ದಿ. ಲಕ್ಷ್ಮಣ ರಾವ್ ಇನಾಂದಾರ್ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಆರಂಭವಾದ ಸಂಘಟನೆ ಇದು ದೇಶದ ಎಲ್ಲಾ ರಾಜ್ಯಗಳಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ರಾಜ್ಯದ ಎಲ್ಲಾ 30 ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿಯೂ ಇಂದು ಸಹಕಾರ ಭಾರತಿಯ ಸಂಘಟನಾ ಕಾರ್ಯ ವಿಸ್ತರಣೆಗೊಂಡಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾಯ್ದೆ 1997ರ ಜಾರಿ, ಹಾಲು ಉತ್ಪಾದಕ ರೈತರಿಗೆ ಬೆಂಬಲ ಬೆಲೆ, ಸಹಕಾರ ಸಂಘಗಳ ಮೂಲಕ ಇ ಸ್ಟಾಂಪಿಂಗ್ ವಿತರಣಾ ವ್ಯವಸ್ಥೆ ಜಾರಿ ಮೂಲಕ ಸಹಕಾರಿ ಸಂಘಟನೆಯಾಗಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಸಹಕಾರ ಭಾರತಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದು ಅವರು ಹೇಳಿದರು.

ಸಹಕಾರ ಭಾರತೀಯ ಹಿರಿಯ ದಿ. ಲಕ್ಷ್ಮಣ್ ರಾವ್ ಇನಾಂದಾರ್ ಜನ್ಮ ಶತಮಾನೋತ್ಸವ ವರ್ಷವನ್ನು ಸಹಕಾರ ಭಾರತಿಯು ಆಚರಿಸಲಿದ್ದು, ಈ ನಿಮಿತ್ತ ಸೆ. 20ರಂದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯ ಘಟಕಗಳು ವಿಚಾರ ಸಂಕಿರಣ, ಸಮಾವೇಶ, ಕಾರ್ಯಾಗಾರಗಳನ್ನು ನಡೆಸುತ್ತಿವೆ. ಮಂಗಳೂರಿನಲ್ಲಿ ಇಂದು ಮತ್ತು ನಾಳೆ ಕಾರ್ಯಾಗಾರ ನಡೆಯುತ್ತಿದ್ದು, ಅದರಲ್ಲಿ ತಾನು ಭಾಗವಹಿಸುತ್ತಿರುವುದಾಗಿ ಎಂ.ಜಿ. ಪಾಟೀಲ್ ತಿಳಿಸಿದರು.

ಗೋಷ್ಠಿಯಲ್ಲಿ ರಾಜ್ಯ ಸಹ ಸಂಘಟನಾ ಪ್ರಮುಖ ಹರೀಶ್ ಆಚಾರ್, ದ.. ಜಿಲ್ಲಾ ಸಹಕಾರ ಭಾರತಿ ಉಪಾಧ್ಯಕ್ಷ ದಯಾನಂದ ಅಡ್ಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News