×
Ad

ಅಂಗಾಂಗ ದಾನದ ಬಗ್ಗೆ ಇನ್ನಷ್ಟು ಜಾಗೃತಿ ಅಗತ್ಯ: ಡಾ. ಪ್ರಶಾಂತ್ ಮಾರ್ಲ

Update: 2016-08-13 14:08 IST

ಮಂಗಳೂರು, ಆ.13: ವ್ಯಕ್ತಿಯೊಬ್ಬನ ಮೆದುಳು ನಿಷ್ಕ್ರಿಯಗೊಂಡ ಸಂದರ್ಭದಲ್ಲಿಯೂ ಆತನ ಹೃದಯ ಕಾರ್ಯನಿರ್ವಹಿಸುತ್ತಿರುತ್ತದೆ. ಈ ಇಂತಹ ಸಂದರ್ಭದಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಇನ್ನೊಬ್ಬನ ಜೀವವನ್ನು ಉಳಿಸಬಹುದಾಗಿದೆ. ಆದರೆ ಈ ರೀತಿಯ ಅಂಗಾಂಗ ದಾನ ಪ್ರಕ್ರಿಯೆ ಬಗ್ಗೆ ಇನ್ನಷ್ಟು ಜಾಗೃತಿಯ ಜತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಎಂದು ಎ.ಜೆ. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಹೇಳಿದರು.

ಅವರು ಇಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಎ.ಜೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಎ.ಜೆ. ದಂತ ವಿಜ್ಞಾನಗಳ ಸಂಸ್ಥೆ ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ದ.ಕ. ಜಿಲ್ಲಾ ಘಟಕ ವತಿಯಿಂದ ನಗರದ ಎ.ಜೆ. ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಅಂಗಾಂಗ ದಾನ ದಿನಾಚರಣೆಯಲ್ಲಿ ಮಾತನಾಡಿದರು.

ಪ್ರಸ್ತುತ ನೇರ ರಕ್ತಸಂಬಂಧಿಗಳಿಂದ ಶೇ. 77ರಷ್ಟು ಅಂಗಾಂಗ ದಾನ ನಡೆದರೆ, ರಕ್ತಸಂಬಂಧ ಹೊಂದಿಲ್ಲದವರಿಂದ ಶೇ.18ರಷ್ಟು ಅಂಗಾಂಗ ದಾನ ನಡೆಯುತ್ತಿದೆ. ಮೆದುಳು ನಿಷ್ಕ್ರಿಯಗೊಂಡವರಿಂದ ಶೇ. 5ರಷ್ಟು ಮಾತ್ರ ಅಂಗಾಂಗ ದಾನ ನಡೆಯುತ್ತಿದೆ. ಒಮ್ಮೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ ಮತ್ತೆ ಮೊದಲಿನಂತಾಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೆದುಳು ನಿಷ್ಕ್ರಿಯಗೊಂಡವರ ಅಂಗಾಂಗ ದಾನದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದವರು ಹೇಳಿದರು.

ಅಂಗಾಂಗ ದಾನಕ್ಕೆ ನೋಂದಣಿ ಮಾಡಿದವರೆಲ್ಲರಿಂದಲೂ ಅಂಗಾಂಗ ದಾನ ಆಗುತ್ತಿಲ್ಲ. ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಅಂಗಾಂಗ ದಾನಕ್ಕೆ ಆಸಕ್ತಿ ತೋರಿಸಿದರೂ ಆತನ ಕುಟುಂಬಸ್ಥರು ಇದಕ್ಕೆ ವಿರೋಧ ತೋರಿಸುವುದೇ ಅಧಿಕ. ಇದರಿಂದಾಗಿ ಅಂಗಾಂಗ ದಾನಕ್ಕೆ ಹೆಚ್ಚಿನ ಮಹತ್ವ ದೊರಕಿಲ್ಲ. ದೇಶದಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ಮಂದಿ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪೈಕಿ ಮೆದುಳು ನಿಷ್ಕ್ರಿಯಗೊಳ್ಳುವ ಶೇ.25ರಷ್ಟು ಮಂದಿ ಅಂಗಾಂಗ ದಾನ ಮಾಡಿದರೆ ಪ್ರಸ್ತುತ ಕಿಡ್ನಿ ಕಸಿಗೆ ನೋಂದಣಿ ಮಾಡಿಕೊಂಡವರಿಗೆ ಬದಲಿ ಕಿಡ್ನಿ ಒದಗಿಸಬಹುದು ಎಂದು ಅವರು ಹೇಳಿದರು.

ಎಜೆ ಇನ್‌ಸ್ಟಿಟ್ಯೂಟ್ ಮತ್ತು ಮೆಡಿಕಲ್ ಕಾಲೇಜಿನ ಡೀನ್ ಡಾ. ಅಶೋಕ್ ಹೆಗ್ಡೆ ಮಾತನಾಡಿ, ದೇಶದಲ್ಲಿ ಸುಮಾರು 5000 ಮಂದಿ ಅಂಗಾಂಗ ದಾನಕ್ಕಾಗಿ ಕಾದು ಕೊನೆಗೆ ಸಿಗದೆ ಕೊನೆಯುಸಿರೆಳೆಯುವ ಪರಿಸ್ಥಿತಿ ಇದೆ. ಎಲ್ಲಾ ಧರ್ಮಗಳು ಪುನರ್ಜನ್ಮದ ಬಗ್ಗೆ ಒತ್ತು ನೀಡುತ್ತವೆ. ಆದರೆ ಅಂಗಾಂಗ ದಾನಗಳ ಮೂಲಕ ವ್ಯಕ್ತಿಯೊಬ್ಬನಿಗೆ ಪುನರ್ಜನ್ಮ ನೀಡುವ ಅವಕಾಶ ನಮ್ಮಲ್ಲಿದೆ ಎಂದು ಹೇಳಿದರು.

ಮೂತ್ರಪಿಂಡಶಾಸ್ತ್ರಜ್ಞ ಡಾ. ರಾಘವೇಂದ್ರ ನಾಯಕ್ ಮಾತನಾಡಿ, ಅಂಗಾಂಗ ದಾನ ಮೂಲಕ ಒಬ್ಬನಿಂದ ಹಲವರಿಗೆ ಜೀವದಾನ ನಡೆಸಬಹುದು ಎಂದರು.

ಕಾರ್ಯಕ್ರಮದಲ್ಲಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದವರಿಗೆ ಪ್ರತಿಜ್ಞಾ ಪತ್ರ ಹಸ್ತಾಂತರಿಸಲಾಯಿತು. ತನ್ನ ತಾಯಿಯಿಂದ ಕಿಡ್ನಿ ಪಡೆದು ಕಿಡ್ನಿ ಕಸಿಗೆ ಒಳಗಾದ ಶಿವಾನಿ ಅನಿಸಿಕೆ ಹಂಚಿಕೊಂಡರು.

ಯುರಾಲಜಿ ವಿಭಾಗ ಮುಖ್ಯಸ್ಥ ಡಾ. ಸುನೀಲ್, ಭಾರತೀಯ ದಂತ ವೈದ್ಯಕೀಯ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಡಾ. ಶಿಶಿರ್ ಶೆಟ್ಟಿ ಉಪಸ್ಥಿತರಿದ್ದರು.

15ರಂದು ಬೈಕ್- ಸೈಕಲ್ ರ್ಯಾಲಿ

ನಗರದ ಎಜೆ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿರುವ ಜೀವನ್ ಹಾಗೂ ಲೀನಾ ಎಂಬವರ ಹೆಸರಿನಲ್ಲಿ ಜೀವನ್‌ ವಿಲೀನ ಎಂಬ ಅಂಗಾಂಗ ದಾನ ಆಂದೋಲನವನ್ನು ಆರಂಭಿಸಲಾಗಿದ್ದು, ಈಗಾಗಲೇ ಒಟ್ಟು ಆರು ಮಂದಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದಾರೆ. ಇದೀಗ ಎಜೆ ಆಸ್ಪತ್ರೆಯು ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್, ಎಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸಸ್, ಮಂಗಳೂರು ಬೈಸಿಕಲ್ ಕ್ಲಬ್ ಮತ್ತು ರೌಂಡ್ ಟೇಬಲ್ 115 ಸಂಸ್ಥೆಗಳ ಸಹಭಾಗಿತ್ವದಲ್ಲಿ ಆ. 15ರಂದು ವಿಶ್ವ ಅಂಗಾಂಗ ದಾನ ದಿನಾಚರಣೆ ಅಂಗವಾಗಿ ಬೈಕ್ ಮತ್ತು ಸೈಕಲ್ ರ್ಯಾಲಿಯನ್ನು ಆಯೋಜಿಸಲಾಗಿದೆ. ರ್ಯಾಲಿಗೆ ಬೆಳಗ್ಗೆ 8 ಗಂಟೆಗೆ ನಗರದ ಪುರಭವನದ ಆವರಣದಲ್ಲಿ ಮೇಯರ್ ಹರಿನಾಥ್ ಚಾಲನೆ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News