ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದ ಅಭಿವೃದ್ಧಿ ಪೊಳ್ಳು: ಲಕ್ಷ್ಮೀ
ಮಂಗಳೂರು, ಆ.13: ಕೇಂದ್ರದ ಎನ್‌ಡಿಎ ನೇತೃತ್ವದ ಸರಕಾರದ ಸ್ವಯಂ ಘೋಷಿತ ಅಭಿವೃದ್ಧಿ ಬೋಗಸ್ ಹಾಗೂ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದೆ ಅಭಿವೃದ್ಧಿಯೆಂಬುದೇ ಪೊಳ್ಳು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಹೇಳಿದ್ದಾರೆ.
ಅವರು ಇಂದು ನಗರದ ಎನ್‌ಜಿಒ ಸಭಾಂಗಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಜನರಿಗೆ ಹೊಟ್ಟೆ ತುಂಬಾ ಆಹಾರ ನೀಡಲಾಗದೆ ಬಾಣಂತಿಯರು, ಮಕ್ಕಳ ಸಾವು, ಹುಟ್ಟುವ ಮಕ್ಕಳು ವಿಕಲಚೇತನರಾಗಿರುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಿರುವಾಗ ದೇಶ ಅಭಿವೃದ್ಧಿಯಾಗುತ್ತಿದೆ ಎಂಬ ಕೇಂದ್ರ ಸರಕಾರದ ಘೋಷಣೆಯೇ ಬೋಗಸ್ ಎಂದವರು ಟೀಕಿಸಿದರು.
ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಎಂಬ ಘೋಷಣೆಯನ್ನು ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಆದೇಶ ನಮಗೆ ಬೇಕಾಗಿಲ್ಲ. ಬದಲಾಗಿ ಹೆಣ್ಣು ಮಕ್ಕಳಿಗೆ ಸುರಕ್ಷಿತ, ಸುಭದ್ರ ಜೀವನದ ಜತೆಗೆ ಉತ್ತಮ ಬದುಕು ನೀಡುವಲ್ಲಿ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು.
ಸರಕಾರಿ ಶಾಲಾ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಕಡಿಮೆ ಆಗಿದೆ. ವ್ಯವಸ್ಥಿತವಾಗಿ ಸರಕಾರ ಸರಕಾರಿ ಶಾಲೆಗಳನ್ನು ಹಾಗೂ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆಪಾದಿಸಿದ ಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಸುರಕ್ಷತೆ ಎಂಬುದೇ ಇಂದು ಸವಾಲಾಗಿದೆ. ಮನೆಯೊಳಗೂ ಹೊರಗೂ ದುಡಿಯುವ ಹೆಣ್ಣಿಗೆ ರಕ್ಷಣೆಯೇ ಇಲ್ಲ. ಈ ಎಲ್ಲಾ ಅಂಶಗಳ ಬಗ್ಗೆ ಮಹಿಳೆಯರು ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಹೇಮಲತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಸಂಘಟನೆಯ ನಾಯಕರಾದ ವಿಲಾಸಿನಿ, ಪದ್ಮಾವತಿ ಶೆಟ್ಟಿ, ಕಿರಣ್ ಪ್ರಭಾ, ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.