ಜನರಿಗೆ ಅಪರಾಧವೆಸಗಲು ಮೋದಿಯಿಂದ ಪ್ರೇರಣೆ :ಆಝಂಖಾನ್
ರಾಮ್‌ಪುರ್,ಆ.13: ರಾಮ್‌ಪುರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತಾಡುತ್ತಾ ಅಝಂಖಾನ್ ಮತ್ತೊಮ್ಮೆ ಪ್ರಧಾನಿ ಮೋದಿಯ ಮೇಲೆ ಮಾತಿನ ಚಾಟಿ ಬೀಸಿದ್ದಾರೆ. ಪ್ರಧಾನಿ ಮೋದಿಯನ್ನು"ದುರ್ಬಲ, ಕಡಿಮೆ ಆತ್ಮವಿಶ್ವಾಸದ ವ್ಯಕ್ತಿ"ಯೆಂದು ಹೇಳಿದ ಅಝಂಖಾನ್, "ಮೋದಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಬದಲು ತನಗೇ ಗುಂಡು ಹಾರಿಸಿ ಎನ್ನುತ್ತಿದ್ದಾರೆ. ಇದು ಪ್ರಧಾನಿಯ ಕಮಿಟೆಡ್ ಕ್ರೈಮ್ ಆಗಿದೆ. ಅವರು ಸಿಆರ್‌ಪಿಸಿ ಅಪರಾಧಿಯಾಗಿದ್ದಾರೆ. ಪ್ರಧಾನಿ ಸ್ವಯಂ ತನಗೆ ಗುಂಡು ಹಾರಿಸಲು ಹೇಳುವ ಮೂಲಕ ಜನರ ಖಾತೆಗೆ ಹಣ ಹಾಕುವುದಾಗಿ ಹೇಳಿ ವಂಚಿಸಿದ ರೀತಿಯಲ್ಲಿಯೇ ಜನರನ್ನು ಮತ್ತೊಮ್ಮೆ ವಂಚಿಸುತ್ತಿದ್ದಾರೆ" ಎಂದು ಅಝಂಖಾನ್ ಹೇಳಿರುವುದಾಗಿ ವರದಿಯಾಗಿದೆ.
ಇದೇ ವೇಳೆ ಅಝಂಖಾನ್, " ಪ್ರಧಾನಿ ತನಗೆ ಗುಂಡು ಹಾರಿಸಿ ಎಂದು ಹೇಳಿಕೆ ನೀಡುವ ಜನರಿಗೆ ಅಪರಾಧವೆಸಗಲು ಪ್ರೇರಣೆ ನೀಡಿದ್ದಾರೆ. ಈ ಹೇಳಿಕೆಗಾಗಿ ಮೋದಿ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಪ್ರಧಾನಿ ಅಪರಾಧವೆಸಗುವಂತೆ ಮತ್ತು ತನ್ನ ಹತ್ಯೆ ನಡೆಸುವಂತೆ ಜನರಿಗೆ ಪ್ರಚೋದನೆ ನೀಡಿದ್ದಾರೆ" ಎಂದು ಟೀಕಿಸಿದ್ದಾರೆ.
ಶಾರುಕ್ ಖಾನ್‌ರನ್ನು ಅಮೆರಿಕದಲ್ಲಿ ತಡೆಹಿಡಿದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಝಂಖಾನ್,"ದೇಶದಲ್ಲಿ ಮೋದಿ, ದೇಶದ ಹೊರಗೆ ಮೋದೀಜಿಯ ಗೆಳೆಯ ಬರಾಕ್‌ಜಿ ಬದುಕಲು ಬಿಡುವುದಿಲ್ಲ:ಕೊನೆಗೂ ನಾವೆಲ್ಲಿಗೆ ಹೋಗಬೇಕು" ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರೊಬ್ಬರ ಮೇಲೆ ನಡೆದ ಗುಂಡುಹಾರಾಟದ ಕುರಿತು ಪ್ರತಿಕ್ರಿಯೆ ನೀಡುತ್ತಾ "ಸಾಯುವ ಮತ್ತು ಸಾಯಿಸುವ ಇಬ್ಬರೂ ಕೆಟ್ಟವರೇ ಆಗಿರುತ್ತಾರೆ. ಒಳ್ಳೆಯ ಕೆಲಸಗಳಿಗೆ ಗುಂಡು ಹಾರಿಸಲಾಗುವುದಿಲ್ಲ. ಒಂದು ವೇಳೆ ಅವರ ಕೆಲಸ ಕೆಟ್ಟದ್ದಾಗಿದ್ದರೆ ಗುಂಡು ಹಾರಿಸಿರಬಹುದು ಎಂದು ಅಝಂಖಾನ್ ವ್ಯಂಗ್ಯವಾಡಿದ್ದಾರೆ.
ಬಿಎಸ್ಪಿಯ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಝಂಖಾನ್ "ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಅಲ್ಲಿ ಹೆಚ್ಚು ಸಂಪಾದನೆ ಇರಬಹುದು. ಆದ್ದರಿಂದ ಅವರು ಅಲ್ಲಿಗೆ ಹೋಗಿದ್ದಾರೆ. ಬಿಎಸ್ಪಿಯಲ್ಲಿ ಸಂಪಾದನೆ ಕಡಿಮೆ ಇರಬಹುದು" ಎಂದು ಹೇಳಿದ್ದಾರೆ. ಇದೇ ವೇಳೆ "ಸಮಾಜವಾದಿ ಪಕ್ಷದಿಂದ ಯಾರೂ ಬಿಜೆಪಿ ಸೇರಿಲ್ಲ" ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.