×
Ad

ಗ್ರಾ.ಪಂ. ನೌಕರರಿಗೆ ಪರಿಷ್ಕೃತ ಬಾಕಿ ಕನಿಷ್ಠ ವೇತನ ನೀಡಲು ಸಿಐಟಿಯು ಆಗ್ರಹ

Update: 2016-08-13 17:19 IST

ಮಂಗಳೂರು, ಆ.13: ಕರ್ನಾಟಕ ಸರಕಾವು ಎಪ್ರಿಲ್ 1ರಿಂದ ಜಾರಿಯಾಗುವಂತೆ ಗ್ರಾಮ ಪಂಚಾಯತ್ ನೌಕರರಿಗೆ ಪರಿಷ್ಕೃತಗೊಳಿಸಿರುವ ಬಾಕಿ ಕನಿಷ್ಠವೇತನವನ್ನು ತಕ್ಷಣ ತುಟ್ಟಿ ಭತ್ತೆ ಸೇರಿಸಿ ನೀಡಬೇಕು ಎಂದು ಸಿಐಟಿಯು ಆಗ್ರಹಿಸಿದೆ.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿಐಟಿಯು)ದ ಜಿಲ್ಲಾಧ್ಯಕ, ಕೆ. ಯಾದವ ಶೆಟ್ಟಿ, ಸಿಐಟಿಯು ಸಂಘಟನೆಯ ಹಲವಾರು ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸಚಿವಾಲಯ ಗ್ರಾ.ಪಂ. ನೌಕರರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಆದೇಶಿಸಿದೆ. ಅದನ್ನು ತಕ್ಷಣದಿಂದ ವಿತರಿಸಬೇಕು ಎಂದು ಒತ್ತಾಯಿಸಿದರು.

ಸರಕಾರದ ಅಧಿಸೂಚನೆಯಂತೆ ಗುಮಾಸ್ತ ಕ್ಲರ್ಕ್, ಕಂಪ್ಯೂಟರ್ ಅಪರೇಟರ್, ಡಾಟಾ ಎಂಟ್ರಿ, ಕರ ವಸೂಲಿಗಾರರಿಗೆ 12,122 ರೂ. ಮತ್ತು ಪಂಪ್ ಅಪರೇಟರ್‌ಗಳಿಗೆ 10,588 ರೂ., ಅಟೆಂಡರ್‌ಗಳಿಗೆ 10,010 ರೂ. ಕನಿಷ್ಠ ಕೂಲಿ ಆದೇಶಿಸಲಾಗಿದೆ. ಅದಕ್ಕೆ ತುಟ್ಟಿ ಭತ್ತೆ ಸೇರಿಸಿ ಎಪ್ರಿಲ್ 1ರಿಂದ ಅನ್ವಯವಾಗುವಂತೆ ನೌಕರರಿಗೆ ನೀಡಬೇಕಾಗಿದೆ ಎಂದು ಅವರು ಹೇಳಿದರು.

ಗ್ರಾ.ಪಂ. ನೌಕರರಿಗೆ ಕನಿಷ್ಠ ಕೂಲಿಗೆ ಒತ್ತಾಯಿಸಿ 2016ರ ಮಾರ್ಚ್ 9ರಂದು ಬೆಂಗಳೂರಿನಲ್ಲಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಆ ಸಂದರ್ಭ ಆಗಿನ ಕಾರ್ಮಿಕ ಸಚಿವರಾಗಿದ್ದ ಪರಮೇಶ್ವರ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ನೌಕರರು ಪರಿಷ್ಕೃತ ಕನಿಷ್ಠ ವೇತನ ಪಡೆಯಲು ಸಾಧ್ಯವಾಗಿದೆ. ಆದರೆ ಕೆಲವು ಸಂಘಟನೆಗಳು ಮಾತ್ರ ಈ ಹೋರಾಟದ ಯಶಸ್ಸನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ನಮ್ಮ ಹೋರಾಟವನ್ನು ತಮ್ಮದೆಂದು ಹೇಳಿಕೊಳ್ಳುವ ಮೂಲಕ ಅಪಪ್ರಚಾರ ನಡೆಸುತ್ತಿದೆ ಎಂದು ಯಾದವ ಶೆಟ್ಟಿ ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಘು ಸುಬ್ರಹ್ಮಣ್ಯ, ಗೌರವ ಅಧ್ಯಕ್ಷ ಜಯಶೀಲ ಶೆಟ್ಟಿ, ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಉದಯ ನಾಯ್ಕ, ಜಿಲ್ಲಾ ಸಮಿತಿ ಮುಖಂಡರಾದ ಗುಲಾಬಿ, ಸಂಜಯ್, ಪ್ರಶಾಂತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News