×
Ad

ಕುಂಬ್ರ: ವಿದ್ಯಾರ್ಥಿಗಳು ಸಾಧನೆಗೈಯುವಂತೆ ಪ್ರೇರೇಪಿಸಲು ಪ್ರಾಂಶುಪಾಲರಿಂದ ಹೊಸ ಉಪಾಯ

Update: 2016-08-13 17:52 IST

ಪುತ್ತೂರು, ಆ.13: ಕುಂಬ್ರ ಕಾಲೇಜ್‌ನಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ತಲಾ 600 ರೂ. ನೀಡುವುದಾಗಿ ಕಾಲೇಜು ಪ್ರಾಂಶುಪಾಲ ದುಗ್ಗಪ್ಪ ಘೋಷಿಸಿದ್ದಾರೆ.

ಕಾಲೇಜಿನಲ್ಲಿ ಕಳೆದ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡದೇ ಇದ್ದಲ್ಲಿ ಪ್ರತಿಭೆಗೆ ಘಾಸಿಯಾಗಬಹುದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ಶ್ರದ್ಧೆ ಇಡಬೇಕು, ಶ್ರದ್ಧೆ ಇದ್ದರೆ ಮಾತ್ರ ಆತ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಾಧಕರು ಅಧಿಕವಾಗಬೇಕು. ಹಾಗಿದ್ದಲ್ಲಿ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯವಾಗುತ್ತದೆ. ಉನ್ನತ ಶಿಕ್ಷಣವನ್ನು ಪಡೆದು ಪ್ರತಿಯೊಬ್ಬರು ಸ್ವತಂತ್ರ ಬದುಕಿನತ್ತ ಚಿತ್ತ ಹರಿಸಬೇಕು ಎಂದು ಹಿತವಚನ ನೀಡಿದರು.

ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ ಮಾತನಾಡಿ, ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಎಲ್ಲಾ ರೀತಿಯ ಪ್ರತಿಭೆಗಳನ್ನು ಕಾಣಲು ಸಾಧ್ಯವಾಗುತ್ತದೆ. ಕಲಿಕೆಯ ಜೊತೆಗೆ ಇತರೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸಲು ಅವಕಾಶವನ್ನು ನೀಡಲಾಗುತ್ತಿದೆ. ಖಾಸಗಿ ಕಾಲೇಜುಗಳು ಎಷ್ಟೇ ಗುಣಮಟ್ಟದಿಂದ ಕೂಡಿದರೂ ಅಲ್ಲಿನ ಶಿಕ್ಷಕರು ತರಬೇತು ಪಡೆದವರಾಗಿರುವುದಿಲ್ಲ ಎಂದು ಹೇಳಿದ ಅವರು ಸರಕಾರಿ ಶಾಲೆ ಮತ್ತು ಕಾಲೇಜುಗಳಲ್ಲೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಮನಸ್ಸನ್ನು ಬೆಳೆಸಬೇಕು ಎಂದು ಹೇಳಿದರು.

ಅಭಿವೃದ್ಧಿ ಸಮಿತಿಯ ಸದಸ್ಯ ಪಿ.ಎಂ. ಅಬ್ದುರ್ರಹ್ಮಾನ್ ಅರಿಯಡ್ಕ ಮತ್ತು ಪುರಂದರ್ ರೈ, ಕುಂಬ್ರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು, ಶೇಖರ್ ರೈ ಕುಂಬ್ರ, ಬಾಲಕೃಷ್ಣ ರೈ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸುಧಾ ಅಭಿನಂದನಾ ಪತ್ರ ವಾಚಿಸಿದರು.

ಉಪನ್ಯಾಸಕಿ ಹೇಮಲತಾ ಸ್ವಾಗತಿಸಿ, ವಿದ್ಯಾರ್ಥಿನಿ ದಿಲ್‌ಶಾನಾ ವಂದಿಸಿದರು. ಸಿತಾರಾ ಸಿರಿನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News