ಬಿಸಿಎಫ್ ನಿಂದ ಇನಾಯತ್ ಅಲಿ ಮುಲ್ಕಿಯವರಿಗೆ 'ಯುವ ಉದ್ಯಮಿ' ಪ್ರಶಸ್ತಿ

Update: 2016-08-13 18:19 GMT

ಮಂಗಳೂರು, ಆ.13: ದುಬೈನ ಬ್ಯಾರೀಸ್ ಕಲ್ಚರಲ್ ಫೋರಂ ವತಿಯಿಂದ ನೀಡಲಾಗುವ ‘ಯುವ ಉದ್ಯಮಿ ಪ್ರಶಸ್ತಿ’ಗೆ ಓಶಿಯನ್ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈ ಲಿಮಿಟೆಡ್‌ನ ನಿರ್ದೇಶಕ ಇನಾಯತ್ ಅಲಿ ಮುಲ್ಕಿಯವರು ಆಯ್ಕೆಯಾಗಿದ್ದಾರೆ.

ಅಪರಾಹ್ನ 2:30ಕ್ಕೆ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ  ನಡೆಯುವ ಬಿಸಿಎಫ್ ಶೈಕ್ಷಣಿಕ ವಿದ್ಯಾರ್ಥಿ ವೇತನ, ವೀಲ್‌ಚೇರ್ ಮತ್ತು ಹೊಲಿಗೆ ಯಂತ್ರ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.

ದುಬೈನ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿ ವೇತನ, ಗಾಲಿಕುರ್ಚಿ ಹಾಗೂ ಹೊಲಿಗೆ ಯಂತ್ರ ಸೇರಿ ಒಟ್ಟು 25 ಲಕ್ಷ ರೂ. ವೌಲ್ಯದ ವಿವಿಧ ಸವಲತ್ತುಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಆ.14ರಂದು ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಬೆಳಗ್ಗೆ 9:30ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಕಾರ್ಯಕ್ರಮವನ್ನು ಬಿಸಿಎಫ್‌ನ ಮುಖ್ಯ ಸಲಹೆಗಾರ ಹಾಗೂ ಝೈನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಹೋಟೆಲ್ಸ್‌ನ ಆಡಳಿತ ನಿರ್ದೇಶಕ ಝಫರುಲ್ಲಾ ಖಾನ್ ಉದ್ಘಾಟಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ವೈ. ಅಬ್ದುಲ್ಲಾ ಕುಂಞಿ, ಫಿಝ್ಝಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎಂ. ಫಾರೂಕ್ ಭಾಗವಹಿಸಲಿದ್ದಾರೆ. ಬಿಸಿಎಫ್‌ನ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್, ಯುವಜನ ಸೇವಾ, ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಮೊಯ್ದೀನ್ ಬಾವ, ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮುಕ್ಕ ಸೀ ಫುಡ್‌ನ ಆಡಳಿತ ನಿರ್ದೇಶಕ ಮುಹಮ್ಮದ್ ಹಾರಿಸ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಎ.ಎಂ. ಖಾನ್ ಬಿಸಿಎಫ್ ರಾಯಭಾರಿ ಮತ್ತು ದರ್ವೇಶ್ ಗ್ರೂಪ್‌ನ ಮುಖ್ಯಸ್ಥ ಹಸನ್ ದರ್ವೇಶ್, ಗಲ್ಫ್ ಮೆಡಿಕಲ್‌ ಯುನಿವರ್ಸಿಟಿಯ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಬರ್ಶ ಇಂಟರ್‌ನ್ಯಾಷನಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಫತಾವುಲ್ಲಾ ಸಾಹೇಬ್‌ತೋನ್ಸೆ, ಧರಹ್ಮಾ ಗ್ರೂಪ್ ಕೆ.ಎಸ್.ಎ.ನ ಆಡಳಿತ ನಿರ್ದೇಶಕ ಶೇಖ್ ಶರೀಫ್, ಬಿಡಬ್ಲ್ಯುಎಫ್ ಅಬುಧಾಬಿಯ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಡಿಕೆಎಸ್‌ಸಿ ಕೆ.ಎಸ್.ಎ.ಯ ಅಧ್ಯಕ್ಷ ಅಬ್ದುಲ್ ಹಮೀದ್, ದುಬೈ ಬಿಲ್ಲವ ಅಸೋಸಿಯೇಷನ್‌ನ ಅಧ್ಯಕ್ಷ ಸತೀಶ್ ಪೂಜಾರಿ, ಬಿಡಬ್ಲ್ಯುಎಫ್ ಅಬುಧಾಬಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಅಲ್ ಮುಝೈನ್ ಕಂಪೆನಿ ಜುಬೈಲ್ ಕೆ.ಎಸ್.ಎ.ನ ಮುಖ್ಯಸ್ಥ ಝಕರಿಯಾ ಜೋಕಟ್ಟೆಯವರಿಗೆ ಸ್ಟಾರ್‌ಆಫ್ ಬ್ಯಾರೀಸ್2016 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News