ಮರಕಡ: ಎರಡನೆ ದಿನವೂ ಶಾಲೆಗೆ ಹಾಜರಾಗದೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2016-08-13 15:10 GMT

ಮಂಗಳೂರು, ಆ. 13: ಮರಕಡದ ದ.ಕ. ಜಿಲ್ಲಾ ಪಂಚಾಯತ್ ಸ.ಮಾ.ಹಿ.ಪ್ರಾ. ಶಾಲೆಯಲ್ಲಿನ ಐದು ಶಿಕ್ಚಕರನ್ನು ವರ್ಗಾಯಿಸುವ ಸರಕಾರದ ನಿರ್ಧಾರದಿಂದ ಆಕ್ರೋಷಿತರಾಗಿರುವ ವಿದ್ಯಾರ್ಥಿಗಳು ಎರಡನೇ ದಿನವೂ ತರಗತಿಗಳಿಗೆ ಹಾಜರಾಗದೆ ಪ್ರತಿಭಟಿಸಿದರು.

ಏಕಾಏಕಿ ಅವೈಜ್ಞಾನಿಕವಾಗಿ ಶಿಕ್ಷಕರ ವರ್ಗಾವಣೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತಿದೆ. ತಮ್ಮ ಮಕ್ಕಳ ಭವಿಷ್ಯವನ್ನು ರಾಜ್ಯ ಸರಕಾರವೇ ಮುಂದೆ ನಿಂತು ಹಾಳು ಮಾಡುತ್ತಿದೆಯೆಂದು ಪೋಷಕರು ಆರೋಪಿಸಿ ತಮ್ಮ ಮಕ್ಕಳ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಮರಕಡ ಶಾಲೆಯಲ್ಲಿ ಸೋಮವಾರ ಪೋಷಕರ ಸಾಮಾನ್ಯ ಸಭೆ ನಡೆಸಲು ಶಾಲಾ ಹಿತರಕ್ಷಣಾ ಸಮಿತಿ ನಿರ್ಧರಿಸಿದ್ದು ಮುಂದಿನ ಹಂತದ ಹೋರಾಟದ ಕುರಿತು ಚರ್ಚಿಸುವ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಇಡೀ ಜಿಲ್ಲೆ 70ನೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ವಾತಾವರಣದಲ್ಲಿದ್ದರೆ ಜಿಲ್ಲೆಯ ಹಲವಾರು ಶಾಲೆಯ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಚಿಂತೆಯಲ್ಲಿ ಮುಳುಗಿದ್ದಾರೆ. ಹಲವು ಸರಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ವಿದ್ಯಾರ್ಥಿಗಳು ಭಾಗವಹಿಸುವುದು ಅನುಮಾನ. ಸರಕಾರ ಶಿಕ್ಷಕರ ವರ್ಗಾವಣೆ ಕೈ ಬಿಡಬೇಕು. ಅಲ್ಲಿಯವರೆಗೆ ಶಾಲೆಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು ಶಾಲೆಯಲ್ಲಿ ನಮಗೆ ಕಲಿಸಲು ಅಗತ್ಯವಾಗಿ ಬೇಕಾಗಿರುವ ಶಿಕ್ಷಕರೇ ಇಲ್ಲದಿರುವಾಗ ನಾವು ಶಾಲೆಗೆ ಬಂದು ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಐದು ಶಿಕ್ಷಕರ ವರ್ಗಾವಣೆಯಾದರೆ ತರಗತಿಗೆ ಒಬ್ಬರು ಶಿಕ್ಷಕರಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಊರವರು ಸೇರಿ ನಮ್ಮ ಶಾಲೆಯನ್ನು ಅಭಿವೃದ್ಧಿ ಪಡಿಸುತ್ತಿದ್ದರೆ ಅತ್ತ ಸರಕಾರವೇ ಮುಂದೆ ನಿಂತು ನಮ್ಮ ಶಾಲೆಯನ್ನು ಮುಚ್ಚಲು ಹೊರಟಿದೆ. ಸರಕಾರ ತನ್ನ ಕ್ರಮವನ್ನು ಸಡಿಲಗೊಳಿಸಿ ಕೂಡಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈ ಬಿಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News