×
Ad

ಸಮಗ್ರ ತನಿಖೆಗೆ ಗೃಹ ಸಚಿವರಿಗೆ ಒತ್ತಾಯ: ಆಸ್ಕರ್ ಫೆರ್ನಾಂಡಿಸ್

Update: 2016-08-13 23:08 IST

ಕಾಪು, ಆ.13: ಕಟಪಾಡಿ ಸರಕಾರಿಗುಡ್ಡೆಯಲ್ಲಿರುವ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಮನೆಗೆ ಇಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಭೇಟಿ ನೀಡಿ, ಮೃತರ ತಾಯಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಇದರಿಂದ ಕುಟುಂಬಕ್ಕೆ ತುಂಬಾ ಅನ್ಯಾಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರಿಯಾಗಿ ತನಿಖೆ ನಡೆಸುವ ಕುರಿತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಗೃಹ ಸಚಿವ ಪರಮೇಶ್ವರ್ ಅವರನ್ನು ಒತ್ತಾಯಿಸಲಾಗುವುದು ಎಂದು ಸದಸ್ಯ ಆಸ್ಕರ್ ಫೆರ್ನಾಂಡಿಸ್ ತಿಳಿಸಿದರು.

ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಕರಣದ ತನಿಖೆಯನ್ನು ದುರ್ಬಲಗೊಳಿಸಿದ ಪೊಲೀಸ್ ನಿರೀಕ್ಷಕ ಗಿರೀಶ್ ಅವರನ್ನು ಅಮಾನತು ಮಾಡ ಬೇಕು. ಈ ಹಿಂದಿನ ತನಿಖಾ ತಂಡದಲ್ಲಿದ್ದವರನ್ನು ಬದಲಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸುವ ಕುರಿತು ಗೃಹ ಸಚಿವರಿಗೆ ಒತ್ತಾಯ ಮಾಡಬೇಕು ಎಂದು ಆಸ್ಕರ್ ಫೆರ್ನಾಂಡಿಸ್ ಅವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್, ಬಿಜೆಪಿ ಬಿಜೆಪಿ ಜಿಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಶ್ಯಾಮಲಾ ಕುಂದರ್, ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ಕಾಂಗ್ರೆಸ್ ಮುಖಂಡರಾದ ನವೀನ್‌ಚಂದ್ರ ಶೆಟ್ಟಿ ವಿನಯ ಬಲ್ಲಾಳ್, ಜೂಲಿಯಟ್ ವೀರಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಸಂಘದಿಂದ ಆಸ್ಕರ್‌ಗೆ ಮನವಿ

ಉಡುಪಿಯ ಬಂಟರ ಸಂಘದ ಪಧಾದಿಕಾರಿಗಳು ಶನಿವಾರ ಕಟಪಾಡಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಮನವಿ ಸಲ್ಲಿಸಿ, ತಕ್ಷಣ ಗೃಹ ಸಚಿವರ ಮೇಲೆ ಒತ್ತಡ ಹೇರಿ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕೊಲೆ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸಾಕ್ಷಗಳನ್ನು ಕಲೆ ಹಾಕುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಈವರೆಗೆ ಆರೋಪಿಗಳನ್ನು ಸರಿಯಾಗಿ ತನಿಖೆ ನಡೆಸಿಲ್ಲ. ತನಿಖಾಧಿಕಾರಿಯಾಗಿದ್ದ ಗಿರೀಶ್ ವಿರುದ್ದ ಕ್ರಮಕೈಗೊಳ್ಳಬೇಕು. ಪ್ರಕರಣದ ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಂಟರ ಸಂಘದ ಜಯಕರ ಶೆಟ್ಟಿ ಇಂದ್ರಾಳಿ, ದಿನಕರ ಶೆಟ್ಟಿ ಕುರ್ಕಾಲು, ನ್ಯಾಯವಾದಿ ಶಾಂತರಾಮ ಶೆಟ್ಟಿ, ಮನೋಹರ್ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ವಿನಯ ಬಲ್ಲಾಳ್, ನವೀನ್ ಶೆಟ್ಟಿ ಪಡುಬಿದ್ರಿ, ಅಶೋಕ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ರತ್ನಾಕರ ಶೆಟ್ಟಿ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News