‘ಒಬಾಮ, ಹಿಲರಿ ಐಸಿಸ್ ಸ್ಥಾಪಕರು’ ಹೇಳಿಕೆಯಿಂದ ಹಿಂದೆ ಸರಿದ ಟ್ರಂಪ್
ಅಲ್ಟೂನ (ಅಮೆರಿಕ), ಆ. 13: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸ್ಥಾಪಕರು ಎಂಬ ತನ್ನ ಹೇಳಿಕೆಯಿಂದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಹಿಂದೆ ಸರಿದಿದ್ದಾರೆ.
ಅದೇ ವೇಳೆ, ರಿಪಬ್ಲಿಕನ್ ಪಕ್ಷವು ತನ್ನ ಅಭ್ಯರ್ಥಿಯ ಬೆನ್ನಹಿಂದೆ ನಿಂತು ಪಕ್ಷದಲ್ಲಿ ಒಗ್ಗಟ್ಟು ಕಾಯುವ ಕೆಲಸ ಮಾಡುತ್ತಿದೆ.
ನವೆಂಬರ್ 8ರಂದು ನಡೆಯುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂರು ಪ್ರಮುಖ ರಾಜ್ಯಗಳಲ್ಲಿ ಟ್ರಂಪ್ ನೆಲೆ ಕಳೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಹೊಸ ಸಮೀಕ್ಷೆಯೊಂದು ತಿಳಿಸಿದೆ.
ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರೀನ್ಸ್ ಪ್ರೈಬಸ್ ಪೆನ್ಸಿಲ್ವೇನಿಯದ ಎರೀಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಅಭ್ಯರ್ಥಿಯನ್ನು ಸಭೆಗೆ ಪರಿಚಯಿಸಿದರು. ಅವರಿಬ್ಬರೂ ಪರಸ್ಪರ ಆಲಿಂಗಿಸಿಕೊಂಡರು.
ರೀನ್ಸ್ ಪ್ರೈಬಸ್ ಈ ತಿಂಗಳ ಆದಿ ಭಾಗದಲ್ಲಿ ಟ್ರಂಪ್‌ರ ಕೆಲವು ವರ್ತನೆಗಳ ಬಗ್ಗೆ ಖಾಸಗಿಯಾಗಿ ತನ್ನ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ.
‘‘ಡೊನಾಲ್ಡ್ ಟ್ರಂಪ್ ಮತ್ತು ಅವರ ಚುನಾವಣಾ ಪ್ರಚಾರದೊಂದಿಗೆ ಕೆಲಸ ಮಾಡಲು ನಮಗೆ ಸಂತೋಷವಾಗುತ್ತಿದೆ’’ ಎಂದು ಸಾವಿರಾರು ಟ್ರಂಪ್ ಬೆಂಬಲಿಗರನ್ನು ಉದ್ದೇಸಿಸಿ ಮಾತನಾಡಿದ ಪ್ರೈಬಸ್ ಹೇಳಿದರು.
ಅಟ್ಲೂನ ಮತ್ತು ಎರಿಯಲ್ಲಿ ಶುಕ್ರವಾರ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಒಬಾಮ ಮತ್ತು ಹಿಲರಿ ಐಸಿಸ್ ಸ್ಥಾಪಕರು ಎಂಬುದಾಗಿ ವಾರದ ಆದಿ ಭಾಗದಲ್ಲಿ ತಾನು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದೆ ಎಂದರು.
‘‘ನಾನು ಏನು ಹೇಳಿರುವೆನೋ ಅದು ಸತ್ಯ. ಆದರೆ, ಅದನ್ನು ವ್ಯಂಗ್ಯದ ಧಾಟಿಯಲ್ಲಿ ಹೇಳಿದ್ದೇನೆ’’ ಎಂದು ಟ್ರಂಪ್ ಅಲ್ಟೂನದಲ್ಲಿ ಹೇಳಿದರು.