ಕಾಸರಗೋಡು: ಮಾವೇಲಿ ಎಕ್ಸ್‌ಪ್ರೆಸ್ ರೈಲಿನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಹೊಗೆ
ಕಾಸರಗೋಡು, ಆ.13: ರೈಲು ಇಂಜಿನ್‌ನಲ್ಲಿನ ಹೊಗೆ ಕಾಣಿಸಿಕೊಂಡ ಕಾರಣ ಮಾವೇಲಿ ಎಕ್ಸ್‌ಪ್ರೆಸ್ ರೈಲು ಚೆರ್ವತ್ತೂರು ಸಮೀಪದ ಕಾರ್ಯಂಗೋಡಿನಲ್ಲಿ ಹಲವು ಗಂಟೆಗಳ ಕಾಲ ನಿಲುಗಡೆಗೊಳಿಸಿದ ಘಟನೆ ಇಂದು ನಡೆದಿದೆ.
ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್ ಚೆರ್ವತ್ತೂರು ತಲುಪಿದಾಗ ಅದರ ಎಂಜಿನ್‌ನಲ್ಲಿ ಹಠಾತ್ ಹೊಗೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೈಲನ್ನು ಕಾರ್ಯಂಗೋಡು ಸೇತುವೆ ಬಳಿ ನಿಲುಗಡೆಗೊಳಿಸಲಾಯಿತು. ಬಳಿಕ ಅದರ ಚಾಲಕ ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ತಜ್ಞ ಅಧಿಕಾರಿಗಳು ರೈಲನ್ನು ತಪಾಸಣೆ ನಡೆಸಿದರು. ಬದಲಿ ಎಂಜಿನ್ ಅಳವಡಿಸಿ ಮಾವೇಲಿ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮುಂದುವರಿಸಲಾಯಿತು. ಕಾಸರಗೋಡಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯ ಅರಣ್ಯ ಮತ್ತು ಪಶುಸಂಗೋಪನಾ ಸಚಿವ ರಾಜು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಗಂಟೆಗಟ್ಟಲೆ ಮಾವೇಲಿ ಎಕ್ಸ್‌ಪ್ರೆಸ್ ಹಳಿಯಲ್ಲೇ ನಿಲುಗಡೆಗೊಳಿಸಿದ್ದರಿಂದ ರೈಲು ಬೈಂದೂರು ಪ್ಯಾಸೆಂಜರ್ ಮತ್ತು ಮಲಬಾರ್ ಎಕ್ಸ್‌ಪ್ರೆಸ್ ರೈಲನ್ನು ಕ್ರಮವಾಗಿ ನೀಲೇಶ್ವರ ಮತ್ತು ಕಾಂಞಗಾಡ್ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಗಿತ್ತು.