ಚಿನ್ನದ ಪದಕದೊಂದಿಗೆ ಫೆಲ್ಪ್ಸ್ ವಿದಾಯ
ರಿಯೋ ಡಿ ಜನೈರೊ, ಆ.14: ವಿಶ್ವದ ಶ್ರೇಷ್ಠ ಒಲಿಂಪಿಯನ್, ಅಮೆರಿಕದ ‘ಗೋಲ್ಡನ್ ಫಿಶ್’ ಖ್ಯಾತಿಯ ಸ್ವಿಮ್ಮರ್ ಮೈಕಲ್ ಫೆಲ್ಪ್ಸ್ 4-100 ಮೀ. ಮಿಡ್ಲೆ ರಿಲೇಯಲ್ಲಿ ಚಿನ್ನದ ಪದಕವನ್ನು ಜಯಿಸುವ ಮೂಲಕ ಶನಿವಾರ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದಾರೆ.
ಫೆಲ್ಪ್ಸ್ ಐದು ಒಲಿಂಪಿಕ್ಸ್‌ಗಳಲ್ಲಿ ಒಟ್ಟು 23 ಚಿನ್ನದ ಪದಕಗಳನ್ನು ಜಯಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಫೆಲ್ಪ್ಸ್ ತಮ್ಮ ಅತ್ಯಂತ ಯಶಸ್ವಿ ಒಲಿಂಪಿಕ್ಸ್ ವೃತ್ತಿಬದುಕಿನಲ್ಲಿ 23 ಚಿನ್ನ, 3 ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಸಹಿತ ಒಟ್ಟು 27 ಪದಕಗಳನ್ನು ಜಯಿಸಿದ್ದಾರೆ. 2000ರಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ 15ರ ಹರೆಯದಲ್ಲಿ ಚೊಚ್ಚಲ ಒಲಿಂಪಿಕ್ಸ್ ಆಡಿದ್ದ ಫೆಲ್ಪ್ಸ್ ಐದು ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸಿದ ಅಮೆರಿಕದ ಮೊದಲ ಪುರುಷರ ಈಜುಪಟು ಎನಿಸಿಕೊಂಡಿದ್ದಾರೆ.
ವೃತ್ತಿಜೀವನದಲ್ಲಿ 39 ಬಾರಿ ವಿಶ್ವ ದಾಖಲೆಯನ್ನು ಪುಡಿಗಟ್ಟಿರುವ ಅಜಾನುಬಾಹು ಫೆಲ್ಪ್ಸ್ ಒಲಿಂಪಿಕ್ಸ್‌ನಲ್ಲಿ 200 ಮೀ. ವೈಯಕ್ತಿಕ ಮಿಡ್ಲೆಯಲ್ಲಿ ಸತತ ನಾಲ್ಕು ಬಾರಿ ಚಿನ್ನ ಜಯಿಸಿದ ಸಾಧನೆ ಮಾಡಿದ್ದರು.
ಶನಿವಾರ ರೇಸ್‌ನ ಬಳಿಕ ಅಭಿಮಾನಿಗಳತ್ತ ಕೈಬೀಸಿದ ಫೆಲ್ಪ್ಸ್ ಯಶಸ್ವಿ ಒಲಿಂಪಿಕ್ಸ್ ವೃತ್ತಿಬದುಕಿಗೆ ಚಿನ್ನದ ಪದಕದೊಂದಿಗೆ ವಿದಾಯ ಹೇಳಿದರು. ರಿಯಾನ್ ಮುರ್ಫಿ ಅವರೊಂದಿಗೆ 4-100 ಮೀ. ರಿಲೇಯಲ್ಲಿ ಸ್ಪರ್ಧಿಸಿದ್ದ ಫೆಲ್ಪ್ಸ್ ಮೂರು ನಿಮಿಷ, 27.95 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಬ್ರಿಟನ್ ಹಾಗೂ ಆಸ್ಟ್ರೇಲಿಯ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿವೆ.