ನಾಲ್ಕನೆ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮೇಲುಗೈ

Update: 2016-08-14 07:17 GMT

ಲಂಡನ್, ಆ.14: ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಬಾರಿಸಿದ ಭರ್ಜರಿ ದ್ವಿಶತಕದ(218) ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.

ಮೂರನೆ ದಿನವಾದ ಶನಿವಾರ ಆಟ ಕೊನೆಗೊಂಡಾಗ ಇಂಗ್ಲೆಂಡ್ 2ನೆ ಇನಿಂಗ್ಸ್‌ನಲ್ಲಿ 88 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಗ್ಯಾರಿ ಬ್ಯಾಲನ್ಸ್(4) ಹಾಗೂ ಜಾನಿ ಬೈರ್‌ಸ್ಟೋವ್(14) ಕ್ರೀಸ್ ಕಾಯ್ದುಕೊಂಡಿದ್ದರು.

ಏಳು ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿದ್ದ ಯೂನಿಸ್ ಖಾನ್ ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನಲ್ಲಿ 542 ರನ್ ಗಳಿಸಿದ್ದಲ್ಲದೆ 214 ರನ್ ಮುನ್ನಡೆ ಸಂಪಾದಿಸಲು ನೆರವಾಗಿದ್ದರು. 6ನೆ ಬಾರಿ ದ್ವಿಶತಕ ಬಾರಿಸಿದ ಯೂನಿಸ್‌ಖಾನ್(218 ರನ್, 308 ಎಸೆತ, 31 ಬೌಂಡರಿ, 4 ಸಿಕ್ಸರ್) ಅಸದ್ ಶಫೀಕ್(109)ರೊಂದಿಗೆ 4ನೆ ವಿಕೆಟ್‌ಗೆ 150 ರನ್ ಸೇರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಯೂನಿಸ್ ಮಾಜಿ ನಾಯಕ ಜಾವೇದ್ ಮಿಯಾಂದಾದ್‌ರೊಂದಿಗೆ ಪಾಕ್ ಪರ ಅತ್ಯಂತ ಹೆಚ್ಚು ದ್ವಿಶತಕ ಬಾರಿಸಿದ ದಾಖಲೆ ಹಂಚಿಕೊಂಡರು.

3ನೆ ದಿನದಾಟದಂತ್ಯಕ್ಕೆ ಅಲೆಸ್ಟೈರ್ ಕುಕ್, ಅಲೆಕ್ಸ್ ಹ್ಯಾಲೆಸ್, ಜೇಮ್ಸ್ ವಿನ್ಸಿ ಹಾಗೂ ಜೋ ರೂಟ್ ವಿಕೆಟ್ ಉಡಾಯಿಸಿರುವ ಪಾಕ್ ನಾಲ್ಕನೆ ದಿನವಾದ ರವಿವಾರವೇ ಪಂದ್ಯವನ್ನು ಜಯಿಸಿ ನಾಲ್ಕು ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಲು ಎದುರು ನೋಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News