ಸುಳ್ಯ: ಡಾ ಹನೂರು ಕೃಷ್ಣಮೂರ್ತಿ ಅವರೊಂದಿಗೆ ಸಂವಾದ
ಸುಳ್ಯ,ಆ.14: ಹಿರಿಯ ಜಾನಪದ ವಿದ್ವಾಂಸ, ಖ್ಯಾತ ಲೇಖಕರಾದ ಡಾ ಹನೂರು ಕೃಷ್ಣಮೂರ್ತಿ ಅವರೊಂದಿಗೆ ಸಂವಾದ ಕಾರ್ಯಕ್ರಮವು ಸುಳ್ಯದ ಎ.ಪಿ.ಎಂ.ಸಿ. ಸಭಾಭವನದಲ್ಲಿ ನಡೆಯಿತು.
ಯಕ್ಷಗಾನ, ಅದರಲ್ಲಿನ ಪಾತ್ರಗಳು, ಅಭಿನಯ ಶಕ್ತಿ, ಭಾವಾಭಿವ್ಯಕ್ಕಿ, ಕುರೂಪ ಮತ್ತು ಸೌಂದರ್ಯದ ಚರ್ಚೆ, ಪುರಾಣದ ಪಾತ್ರಗಳೊಂದಿಗೆ ವರ್ತಮಾನದ ಅನುಸಂಧಾನ ಮತ್ತಿತರ ಸಂಗತಿಗಳ ಬಗೆಗೆ ಹನೂರು ಕೃಷ್ಣಮೂರ್ತಿಯವರು ಸೇರಿದವರೊಂದಿಗೆ ಸಂವಾದಿಸಿ ತನ್ನ ಒಳನೋಟಗಳನ್ನು ಬಿಚ್ಚಿಟ್ಟರು. ಮಂಟೆಸ್ವಾಮಿ ಕಥನ , ಈ ಭಾಗದ ಜನಪದ ಕಲೆಗಳು, ಪುರಾಣ ಮತ್ತು ಜನಪದದ ತೌಲನಿಕ ವಿಮರ್ಶೆ ಕೂಡಾ ನಡೆಯಿತು. ಹಳೆಯ ನಾಟಕಗಳಿಗೆ ಹೊಸರೂಪ ನೀಡಬೇಕೆಂಬ ತನ್ನ ಹಂಬಲವನ್ನೂ ಬಿಚ್ಚಿಟ್ಟರು. ಹನೂರು ಕೃಷ್ಣಮೂರ್ತಿಯವರೊಂದಿಗೆ ಸಂಸ್ಕೃತಿ ಚಿಂತಕ ಕೆ.ಜಿ.ಸಚ್ಚಿದಾನಂದ, ಶಿಕ್ಷಣ ಚಿಂತಕ ಡಾ.ಎಂ.ಸಿ.ಮನೋಹರ್, ಕಲಾವಿದ ವರ್ಟಿ ಬಲಿಯೊರಾ ಕೂಡಾ ಭಾಗವಹಿಸಿದ್ದರು. ಜಾನಪದ ಸಂಶೋಧಕ ಡಾ. ಸುಂದರ್ ಕೇನಾಜೆ ಕಾರ್ಯಕ್ರಮ ಸಂಘಟಿಸಿದ್ದರು. ಜೀವನ್‌ರಾಂ ಸುಳ್ಯ, ಜಯಮ್ಮ ಚೆಟ್ಟಿಮಾಡ, ಕೆ. ಕೃಷ್ಣಮೂರ್ತಿ, ಮೀನಾ ಕೃಷ್ಣಮೂರ್ತಿ, ರೇಖಾ ಶೇಟ್, ದಿನೇಶ್ ಕುಕ್ಕುಜಡ್ಕ, ನಾರಾಯಣ ಹೆಗಡೆ, ಕೆ.ವಿ.ಶರ್ಮ, ಲಕ್ಷ್ಮೀನಾರಾಯಣ ಕಜೆಗದ್ದೆ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.