ವಾಲ್ಪಾಡಿಯಲ್ಲಿ ಆಟಿದ ಗೌಜಿ-ಸ್ವಾತಂತ್ರ್ಯ ಸಂಭ್ರಮ
ಮೂಡುಬಿದಿರೆ,ಆ.14 : ವಾಲ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ವಾಲ್ಪಾಡಿ ಫ್ರೆಂಡ್ಸ್, ಯುವಶಕ್ತಿ ಯುವಕ ಮಂಡಲ, ಕಲ್ಪನಾ ಮಹಿಳಾ ಮಂಡಲ, ವಾಲ್ಪಾಡಿ ಶಾಲಾಭಿವೃದ್ಧಿ ಸಮಿತಿ ಮತ್ತು ವಾಲ್ಪಾಡಿ ಗ್ರಾಮಸ್ಥರ ಸಹಯೋಗದೊಂದಿಗೆ ಸ್ನೇಹ, ಸಹಬಾಳ್ವೆ ಮತ್ತು ಸೌಹಾರ್ದತೆಗಾಗಿ "ಆಟಿದ ಗೌಜಿ-ಸ್ವಾತಂತ್ರ್ಯ ಸಂಭ್ರಮ" ಕಾರ್ಯಕ್ರಮವು ವಾಲ್ಪಾಡಿ ಜಿ.ಪಂ.ಕಿ.ಪ್ರಾ.ಶಾಲಾ ಮೈದಾನದಲ್ಲಿ ಭಾನುವಾರ ನಡೆಯಿತು.
ಅಳಿಯೂರು ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ , ತಾ.ಪಂ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಂದಿನ ಕಾಲದಲ್ಲಿ ಅಷಾಢ ತಿಂಗಳಿನಲ್ಲಿ ಹಿರಿಯರು ಪಡುತ್ತಿದ್ದ ಕಷ್ಟದ ಬಗ್ಗೆ ಮತ್ತು ತಿಂಡಿ ತಿನಿಸುಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು.
ಸಿದ್ಧಕಟ್ಟೆ ಸರಕಾರಿ ಪ.ಪೂ.ಕಾಲೇಜಿ ಉಪನ್ಯಾಸಕಿ ಶಾರದಾ ಅವರು ಆಟಿದ ಗೌಜಿಯ ಬಗ್ಗೆ ಉಪನ್ಯಾಸ ನೀಡುತ್ತಾ ಹಿಂದಿನ ಜನರ ಜನಜೀವನವನ್ನು ನೆನಪು ಮಾಡುವ, ನಮ್ಮ ತುಳು ಭಾಷೆ, ಕೃಷಿ, ಆಚಾರ-ವಿಚಾರ ಹಾಗೂ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ನೀಡುವ ಆಟಿಯ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಪ್ರಸ್ತುತ.
ಅಂದು ಹಿರಿಯರು ಕಷ್ಟದ ದಿನಗಳಲ್ಲಿಯೂ ಪ್ರಕೃತಿಯಲ್ಲಿ ಸಿಗುವಂತಹ ಸೊಪ್ಪು ತರಕಾರಿ, ಔಷಧೀಯ ಗುಣಗಳುಳ್ಳ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದುದರಿಂದ ಆರೋಗ್ಯವಂತರಾಗಿ ಇರುತ್ತಿದ್ದರು. ಇದೀಗ ಇಂತಹ ಆಹಾರಗಳನ್ನು ವರ್ಷಕ್ಕೊಂದು ಸಲವಾದರೂ ನಾವೆಲ್ಲರೂ ಸೇವಿಸಬೇಕಾಗಿದೆ ಈ ನಿಟ್ಟಿನಲ್ಲಿ ಇದೀಗ ಶಾಲಾ ಕಾಲೇಜುಗಳಲ್ಲಿ ಆಟಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪೌಷ್ಠಿಕ ಆಹಾರಗಳನ್ನು ಸೇವಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ವಾಣಿಶ್ರೀ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಲ್ಪಾಡಿ ಗ್ರಾ.ಪಂ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಐಸಿವೈಎಂನ ಮೂಡುಬಿದಿರೆ ವಲಯಾಧ್ಯಕ್ಷ ಜೈಸನ್ ಪಿರೇರಾ ಶಿರ್ತಾಡಿ, ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಂ.ಶರೀಫ್, ಮಹಿಳಾ ಮಂಡಲದ ಅಧ್ಯಕ್ಷೆ ಜೆಸಿಂತಾ ಫೆರ್ನಾಂಡಿಸ್, ಶಿರ್ತಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್, ಗ್ರಾ,ಪಂ ಮಾಜಿ ಸದಸ್ಯ ಲಕ್ಷ್ಮಣ್ ಸುವರ್ಣ, ಶಿಕ್ಷಕಿ ರಶ್ಮಿ, ಅಂಗನವಾಡಿ ಶಿಕ್ಷಕಿ ಅತಿಥಿಗಳಾಗಿ ಭಾಗವಹಿಸಿದ್ದರು.
ವಾಲ್ಪಾಡಿ ಫ್ರೆಂಡ್ಸ್‌ನ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ನಿತೇಶ್ ಕುಮಾರ್ ಮಾರ್ನಾಡ್, ಆರಿಫ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ವಾಲ್ಪಾಡಿ ವಂದಿಸಿದರು.
ನಂತರ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆಗಳು, ಆಟಿದ ತಮ್ಮನ, ಶರಣ್ ಕೈಕಂಬ ಮತ್ತು ಬಳಗದವರಿಂದ ಸಂಗೀತ ರಸಮಂಜರಿ, ಸ್ಥಳೀಯರು ಹಾಗು ಆಸಕ್ತ ಸಂಘ ಸಂಸ್ಥೆಗಳ ಸದಸ್ಯರಿಂದ ಮನೋರಂಜನ ಕಾರ್ಯಕ್ರಮಗಳು ನಡೆದವು.