×
Ad

ಕಡಬ ಸರಕಾರಿ ಪದವಿ ಪೂರ್ವ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Update: 2016-08-14 19:33 IST

ಕಡಬ,ಆ.14: ಪೂರ್ವ ವಿದ್ಯಾರ್ಥಿಗಳು ಶಾಲೆಯ ಆಸ್ತಿಯಾಗಿದ್ದು, ತನ್ನ ಗಳಿಕೆಯಲ್ಲಿ ಇಂತಿಷ್ಟು ಪಾಲು ತಾನು ಶಿಕ್ಷಣ ಪಡೆದ ಶಾಲೆಗೆಂದು ದೇಣಿಗೆಯ ರೂಪದಲ್ಲಿ ಮೀಸಲಿಟ್ಟಾಗ ಜೀವನ ಸಾರ್ಥಕವಾಗುತ್ತದೆ ಎಂದು ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪೆರ್ಲ ಹೇಳಿದರು.

  ಅವರು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಕಾಲೇಜಿನ ಪೂರ್ವ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಂಸ್ಥೆಯಿಂದ ನಿರ್ಗಮಿಸಿರುವ ಹಿರಿಯ ವಿದ್ಯಾರ್ಥಿಗಳು ಈ ಕಾಲೇಜಿನ ರಾಯಬಾರಿಗಳು. ಅವರಿಂದ ಸಂಸ್ಥೆಯ ಕೀರ್ತಿ ಎಲ್ಲಡೆ ಪಸರಿಸುವಂತಾಗಿದ್ದು, ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೂರ್ವ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಪೂರ್ವ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಮ್ಮಿಲನವನ್ನು ಮತ್ತು ಭೋಜನ ಕೂಟವನ್ನು ಏರ್ಪಡಿಸಿರುವುದು ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿ. ವಿದ್ಯಾರ್ಥಿ ಜೀವನದ ಗತದಿನಗಳನ್ನು ಸಹಪಾಠಿಗಳೊಂದಿಗೆ ಮೆಲುಕು ಹಾಕುವ, ಶಿಕ್ಷಣ ನೀಡಿದ ಅಧ್ಯಾಪಕರನ್ನು ಗೌರವಿಸುವ ಅಪೂರ್ವ ಸಮ್ಮಿಳನಕ್ಕೆ ಕಾಲೇಜು ಆವರಣ ಸಾಕ್ಷಿಯಾಗಿರುವುದು ಹೆಮ್ಮೆಯ ವಿಚಾರ. ಸುಶಿಕ್ಷಿತರೇ ಸಮಾಜಘಾತುಕ ಶಕ್ತಿಗಳಾಗುತ್ತಿರುವುದು ಖೇದಕರ. ಪ್ರತಿ ವಿದ್ಯಾರ್ಥಿಗೆ ಹೃದಯ ಶ್ರೀಮಂತಿಕೆಯ ಶಿಕ್ಷಣ ದೊರೆತಾಗ ಉತ್ತಮ ನಾಗರಿಕನಾಗಲು ಸಾಧ್ಯ ಎಂದರು.

     ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಪಿ. ವರ್ಗಿಸ್ ಮಾತನಾಡಿ, ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಪದವಿ ಕಾಲೇಜಿನ ಸ್ಥಾಪನೆ ಶೀಘ್ರದಲ್ಲಿ ನಡೆಯಲಿದೆ ಎಂದು ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಸದಸ್ಯರಾದ ಪಿ.ವೈ. ಕುಸುಮಾ, ಫಝಲ್ ಕೋಡಿಂಬಾಳ, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ ಶುಭಹಾರೈಸಿದರು. ಸಾಮಾಜಿಕ ಮುಂದಾಳು ರಾಜರತ್ನ ಆರಿಗ, ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎ. ಉಪಸ್ಥಿತರಿದ್ದರು. ಉಪನ್ಯಾಸಕರಾದ ವಾಸುದೇವ ಗೌಡ ಕೊಲ್ಪೆ ಸ್ವಾಗತಿಸಿ, ಇ.ಸಿ. ಚೆರಿಯನ್ ಬೇಬಿ ವಂದಿಸಿದರು. ಹರಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಕಾಲೇಜಿನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎ. ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮಾರ್ಗದರ್ಶಕ ರಾಜರತ್ನ ಆರಿಗ, ಶ್ರೀ ದುರ್ಗಾಂಬಿಕಾ ದೇವಳದ ವ್ಯಸವ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಉಪಸ್ಥಿತರಿದ್ದರು. ವಿಶೇಷತೆಗಳು:

* ಕಾರ್ಯಕ್ರಮಕ್ಕೆ ಆಗಮಿಸುವ ಹಳೆ ವಿದ್ಯಾರ್ಥಿಗಳ ನೊಂದಣಿ ಕಾರ್ಯಕ್ರಮ ಕಾಲೇಜಿನ ಆವರಣದ ಗೇಟ್ ಬಳಿ ಪ್ರಸಕ್ತ ವಿದ್ಯಾರ್ಥಿಗಳಿಂದ ನಡೆಯಿತು.

* ಕಾಲೇಜು ಆವರಣದಲ್ಲಿ 25 ವರ್ಷವನ್ನು ಬಿಂಬಿಸುವ 25 ವಿವಿಧ ಬಗೆಯ ಬಣ್ಣದ ಬಾವುಟ ಅಳವಡಿಸಲಾಗಿತ್ತು.

* ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ಹಳೆ ವಿದ್ಯಾರ್ಥಿಗಳಿಗಾಗಿ ಭೋಜನ ಕೂಟ ಏರ್ಪಡಿಸಲಾಗಿತ್ತು.

* ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಪಿ.ಪಿ. ಮ್ಯಾಥ್ಯೂ, ವಸಂತ ರಾಯಿ ಗಾಂವ್ಕರ್, ಜೆಪಿಯಂ ಚೆರಿಯನ್, ಕಿಟ್ಟಣ್ಣ ರೈ, ತಮ್ಮಯ್ಯ ಗೌಡ, ಗೋಪಾಲ್ ರಾವ್ ಬಿಳಿನೆಲೆ, ಕುಶಾಲಪ್ಪ, ರೋಶನ್, ಪದ್ಮ, ಮೊದಲಾದ ಅಧ್ಯಾಪಕರು ಹಳೆಯ ನೆನೆಪುಗಳನ್ನು ಮೆಲುಕು ಹಾಕಿದರು. ಕಾಲೇಜು ವತಿಯಿಂದ ಇವರುಗಳನ್ನು ಗೌರವಿಸಲಾಯಿತು.

* ತುಳು ಚಿತ್ರರಂಗದ ’ಪಿಲಿಬೈಲು ಯಮುನಕ್ಕ’ ಚಿತ್ರದ ನಾಯಕಿ ಸೋನಂ ಮುನ್ಸೂರ್, ನಾಯಕ ಮಂಜು ರೈ, ಬಾಲನಟಿ ಪೂರ್ವಿ ಕೆ. ರಾವ್, ನಿರ್ಮಾಪಕ ಹರೀಶ್, ನಿರ್ದೇಶಕ ಸಂದೀಪ್ ರಾಜ್ ತಂಡ ಹಾಡು, ಕುಣಿತಗಳ ಮೂಲಕ ಮನರಂಜಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

* ನೂತನವಾಗಿ ಹಳೆ ವಿದ್ಯಾರ್ಥಿ ಸಂಘ ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News