ಸಾಮಾಜಿಕ, ರಾಜಕೀಯ ಅಸಮಾನತೆ ವಿರುದ್ಧ ಒಗ್ಗೂಡಿ : ಡಾ.ಎಂ.ಚಂದ್ರಪೂಜಾರಿ ಕರೆ

Update: 2016-08-14 16:04 GMT

ಮಂಗಳೂರು, ಆ. 14: ದೇಶದಲ್ಲಿ ರಾರಾಜಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅಸಮಾನತೆ ವಿರುದ್ಧ ಒಗ್ಗೂಡಬೇಕಾದ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹಾಗೂ ಸಂಶೋಧಕ ಡಾ.ಎಂ.ಚಂದ್ರ ಪೂಜಾರಿ ಕರೆ ನೀಡಿದ್ದಾರೆ.

ಅವರು ಇಂದು ಸಂಜೆ ನಗರದ ಪುರಭವನದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಓ) ಹಮ್ಮಿಕೊಂಡ ‘ತೀವ್ರವಾದವನ್ನು ವಿರೋಧಿಸೋಣ, ಹಿತವಾದಿಗಳಾಗೋಣ’ ವಲಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಶೇ. 5ರಷ್ಟು ಜನರಲ್ಲಿ ಮಾತ್ರ ಸಂಪನ್ಮೂಲ ಕೇಂದ್ರೀಕೃತವಾಗಿದ್ದು, ಬಹುತೇಕ ಜನರು ಆರ್ಥಿಕ ಸ್ವಾತಂತ್ರದಿಂದ ವಂಚಿತರಾಗಿದ್ದಾರೆ. ದೇಶದಲ್ಲಿ ತಿನ್ನುವ, ಉಡುವ, ಸಂಸ್ಕೃತಿ, ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವನ್ನು ನಿರ್ಧರಿಸುವ ಹಕ್ಕು ಈ ಶೇ. 5 ಜನರು ನಿಯಂತ್ರಿಸುತ್ತಿದ್ದು, ಈ ವರ್ಗದವರಿಂದಲೇ ಧರ್ಮ ಮತ್ತು ಜಾತಿಯನ್ನು ಒಡೆಯುವ ಕೆಲಸವಾಗುತ್ತಿದೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ಎಲ್ಲ ಸಮುದಾಯದವರೂ ಒಗ್ಗೂಡಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ದೇಶದ ಜನಸಂಖ್ಯೆಯಲ್ಲಿ ಶೇ. 13ರಷ್ಟು ಅಲ್ಪಸಂಖ್ಯಾತರಿದ್ದರೂ ಜನಪ್ರತಿನಿಧಿಗಳಿರುವುದು ಶೇ. 3ರಷ್ಟು. ಇದು ದೇಶದ ರಾಜಕೀಯ ಅಸಮಾನತೆಯನ್ನು ಸೂಚಿಸುತ್ತದೆ. ಸಂವಿಧಾನವು ದೇಶದ ಪ್ರಪತಿ ನಾಗರಿಕನಿಗೂ ಅವನಿಷ್ಟದಂತೆ ಬದುಕು ಕಟ್ಟಿಸಿಕೊಳ್ಳುವ ಹಕ್ಕು ನೀಡಿದ್ದು, ಅದನ್ನು ಕಸಿಯುವ ಪ್ರಯತ್ನ ನಡೆಯುತ್ತಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಐಓ ರಾಷ್ಟ್ರಾಧ್ಯಕ್ಷ ಇಕ್ಬಾಲ್ ಹುಸೈನ್, ದೇಶದ ಸಾಮರಸ್ಯ ಮತ್ತು ಸೌಹಾರ್ದವನ್ನು ಕೆಡಿಸಿ ಸಾಮಾಜಿಕ ಶಾಂತಿಗೆ ಭಂಗ ತರುವಂತಹ ಕೆಲಸಗಳು ನಡೆಯುತ್ತಿದ್ದು, ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಎಚ್ಚರ ಇರುವಂತೆ ಹೇಳಿದರು.

1947ರಲ್ಲಿ ದೇಶದಲ್ಲಿದ್ದ ಕೆಲವು ಸಮಸ್ಯೆಗಳಿಗೆ ಪರಿಹಾರ ಕಾಣಲು ಇಂದಿಗೂ ಸಾಧ್ಯವಾಗಿಲ್ಲ. ಸಾಮಾಜಿಕ ಮತ್ತು ರಾಜಕೀಯ ಅಸಮಾನತೆಗಳು ಇದಕ್ಕೆ ಭಿನ್ನವಾಗಿಲ್ಲ. ದೇಶದ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಲಗಾಮು ಹಾಕುವ ಸಾಧ್ಯವಾಗಿಲ್ಲ ಎಂದರು.

ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದ ಇಕ್ಬಾಲ್ ಹುಸೈನ್, ಸ್ವಾರ್ಥದ ಮನೋಭಾವನೆಯ ಬಿಟ್ಟು ಸಮಾಜಕ್ಕಾಗಿ ಚಿಂತಿಸುವ ಮನೋಭಾವನೆಯನ್ನು ರೂಢಿಸಿಕೊಳ್ಳುವಂತೆ ಯುವಕರಿಗೆ ಅವರು ಕರೆ ನೀಡಿದರು.

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ದೇಶದಲ್ಲಿ ಜನರು ಸೇವಿಸುವ ಆಹಾರದ ಮೇಲೆ ದಾಳಿಗಳು ನಡೆಯುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ಮೌನ ಮುರಿಯಬೇಕಾಗಿದೆ. ಈ ಮೂಲಕ ಶತಮಾನಗಳಿಂದ ಆಚರಣೆಯಲ್ಲಿರುವ ಸೌಹಾರ್ದದ ಪರಂಪರೆಯನ್ನು ಶಿಥಿಲಗೊಳಿಸಲು ಯತ್ನಿಸುವ ದುಷ್ಟ ಶಕ್ತಿಗಳನ್ನು ಮಟ್ಟಹಾಕುವ ಕೆಲಸವಾಗಬೇಕು ಎಂದರು.

ಎಸ್‌ಐಓ ಮಾಜಿ ರಾಷ್ಟ್ರಾಧ್ಯಕ್ಷ ಅಶ್ಫಾಕ್ ಅಹ್ಮದ್ ಶರೀಫ್, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ವಲಯ ಸಂಚಾಲಕ ಅಬ್ದುಸ್ಸಲಾಂ ಯು., ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾಧ್ಯಕ್ಷ ಇಲ್ಯಾಸ್ ಇಸ್ಮಾಯೀಲ್, ಎಸ್‌ಐಓ ಕಾರ್ಯದರ್ಶಿ ಮಾಝ್ ಸಲ್ಮಾನ್ ಮನಿಯಾರ್ ಉಪಸ್ಥಿತರಿದ್ದರು.

ಎಸ್‌ಐಓ ದ.ಕ. ಜಿಲ್ಲಾಧ್ಯಕ್ಷ ರಫೀಕ್ ಬೀದರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಐಓ ಉಡುಪಿ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ ವಂದಿಸಿದರು. ಆಸಿಫ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು. ಶಾಕಿಬ್ ಕಲ್ಲಾಪು ಪ್ರಾರಂಭದಲ್ಲಿ ಕಿರಾಅತ್ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News