ಅಸಮಾನತೆ ಸಂವಿಧಾನದ ಆಶಯಕ್ಕೆ ವಿರುದ್ಧ: ಹರ್ಷ ಮಂದರ್

Update: 2016-08-14 18:11 GMT

ಮಂಗಳೂರು, ಆ.14: ಸಂವಿಧಾನದ ಆಶಯವಾದ ಭ್ರಾತೃತ್ವವು ಸಮಾಜದಲ್ಲಿ ನೆಲೆಗೊಳ್ಳಲು ಭಾರತದ ವಿವಿಧ ವಲಯಗಳಲ್ಲಿ ವ್ಯಾಪಿಸಿರುವ ಅಸಮಾನತೆ ಅಡ್ಡಿಯಾಗುತ್ತಿದೆ ಎಂದು ಖ್ಯಾತ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ತಿಳಿಸಿದರು.

‘ಮಂಗಳೂರು ಅಭಿವೃದ್ಧಿಗಾಗಿ ನಾಗರಿಕ ವೇದಿಕೆ’ಯ ವತಿಯಿಂದ ‘ಭಾರತದ ಭ್ರಾತೃತ್ವಕ್ಕೆ ಸವಾಲುಗಳು’ ಎಂಬ ವಿಷಯದ ಬಗ್ಗೆ ನಗರದಲ್ಲಿ ನಡೆದ ಸಂವಾದಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಸಂವಿಧಾನದ ಬಹುಮುಖ್ಯ ಆಶಯವಾದ ಭ್ರಾತೃತ್ವ, ಸಹೋದರತೆ ಅಥವಾ ಬಂಧುತ್ವ ಬೇರೆ ಬೇರೆ ಕಾರಣಗಳಿಂದ ಸವಕಲಾಗುತ್ತಿದೆ. ದೇಶದಲ್ಲಿ ಸುಶಿಕ್ಷಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಸಂವಿಧಾನದ ವೌಲ್ಯಗಳು ಕುಸಿಯುತ್ತಿರುವುದು ನಿರಾಶಾದಾಯಕ ಬೆಳವಣಿಗೆ ಯಾಗಿದೆ. ಅರುಣಾಚಲ ಪ್ರದೇಶದಂತಹ ರಾಜ್ಯವೊಂದರಲ್ಲಿ 120 ಭಾಷೆಗಳನ್ನು ಆಡುವ ಜನರಿದ್ದಾರೆ. ಅದರಲ್ಲೂ ಒಂದು ಭಾಷೆಯನ್ನು ಕೇವಲ 300 ಜನರು ಮಾತ್ರ ಆಡುತ್ತಾರೆ. ಇಂತಹ ವೈವಿಧ್ಯವನ್ನು ಹೊಂದಿರುವ ದೇಶದಲ್ಲಿ ಪರಸ್ಪರ ಸಹೋದರತೆಯಿಂದ ಇದ್ದಾಗ ಮಾತ್ರ ಸಮಾನತೆಯ ವೌಲ್ಯ ನೆಲೆಸಲು ಸಾಧ್ಯ. ಆದರೆ, ಘರ್‌ವಾಪಸಿಯಂತಹ ಚಟು ವಟಿಕೆಗಳು ಸಮಾನತೆಯ ವೌಲ್ಯಕ್ಕೆ ವಿರುದ್ಧವಾಗಿದೆ ಎಂದರು.
 ಜಾತಿವ್ಯವಸ್ಥೆ ಅಸಮಾನತೆಗೆ ಪ್ರಮುಖ ಕಾರಣ. ಧಾರ್ಮಿಕ ವೌಲ್ಯಗಳು ಸಮಾಜದ ದುರ್ಬಲರ, ದಲಿತರ, ಶೋಷಿತರ, ಅಲ್ಪ ಸಂಖ್ಯಾತರ ಬೆಂಬಲವಾಗಿ ನಿಲ್ಲಬೇಕಾಗಿತ್ತು. ಆದರೆ ಈ ವೌಲ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಗಾಂಧಿಯೂ ವ್ಯಕ್ತಿಗತವಾಗಿ ಧಾರ್ಮಿಕ ವ್ಯಕ್ತಿಯಾಗಿದ್ದರೂ ಧಾರ್ಮಿಕ ಅಂಧಶ್ರದ್ಧೆಯನ್ನು ಹೊಂದಿರಲಿಲ್ಲ. ಅವರು ಗೋಡ್ಸೆಯ ಗುಂಡಿಗೆ ಬಲಿಯಾದ ಸಂದರ್ಭ ಅವರು ನುಡಿದ ‘ರಾಮ್’ ಈ ದೇಶದ ಬಹುಸಂಖ್ಯಾತರ ರಾಮ. ಆ ರಾಮ ಒಂದು ವರ್ಗಕ್ಕೆ ಸೀಮಿತವಾದ, ಹಿಂಸೆಗೆ ಪ್ರಚೋದನೆ ನೀಡುವ ರಾಮನಲ್ಲ. ಆದರೆ ಇಂದು ‘ಜೈ ಶ್ರೀರಾಮ್’ ಘೋಷಣೆ ಕೋಮುದ್ವೇಷದ ಭಾವನೆ ಬೆಳೆಸಲು ಬಳಕೆಯಾಗುತ್ತಿರುವುದು ವಿಪರ್ಯಾಸ ಎಂದರು.
ಮಂಗಳೂರು ಅಭಿವೃದ್ಧಿಗಾಗಿ ನಾಗರಿಕ ವೇದಿಕೆ’ಯ ಸಂಚಾಲಕಿ ವಿದ್ಯಾ ದಿನಕರ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News