‘‘ಪದಕ ತಪ್ಪಿದಕ್ಕೆ ನಿರಾಶೆಯಿಲ್ಲ, ಮುಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನದ ಗುರಿ’’ :ಭಾರತದ ನವತಾರೆ ದೀಪಾ ಕರ್ಮಾಕರ್
ರಿಯೋ ಡಿ ಜನೈರೊ, ಆ.15: "ನನ್ನ ಪಾಲಿಗೆ ಇದು ಮೊದಲ ಒಲಿಂಪಿಕ್ಸ್. ಪದಕ ತಪ್ಪಿದಕ್ಕೆ ನಿರಾಶೆಯಾಗಿಲ್ಲ. ಟೊಕಿಯೊದಲ್ಲಿ 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ತಯಾರಿ ನಡೆಸುವೆ’’ ಎಂದು ರಿಯೋ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ ವಾಲ್ಟ್ ಫೈನಲ್ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನ ಪಡೆದಿರುವ ಭಾರತದ ನವತಾರೆ ದೀಪಾ ಕರ್ಮಾಕರ್ ಹೇಳಿದ್ದಾರೆ.
ನನ್ನ ಪ್ರದರ್ಶನ ತೃಪ್ತಿ ನೀಡಿದೆ. ಇದು ಜೀವನಶ್ರೇಷ್ಠ ಪ್ರದರ್ಶನ. ಆದರೆ ಪದಕ ಗೆದ್ದವರು ನನಗಿಂತ ಉತ್ತಮ ಪ್ರದರ್ಶನ ನೀಡಿದ್ದರು. ಈ ಕಾರಣದಿಂದಾಗಿ ನನ್ನ ಪಾಲಿನ ದಿನವಾಗಿರಲಿಲ್ಲ’’ ಎಂದು ದೀಪಾ ನುಡಿದರು.
23ರ ಹರೆಯದ ದೀಪಾ ಜಿಮ್ನಾಸ್ಟಿಕ್‌ನ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ ಮೊದಲ ಜಿಮ್ನಾಸ್ಟಿಕ್ ತಾರೆ.ಅವರು ಫೈನಲ್‌ನಲ್ಲಿ 15.066 ಅಂಕ ದಾಖಲಿಸಿದ್ದರು.
ಅಮೆರಿಕಾದ ಸಿಮೊನಾ ಬಿಲ್ಸ್(15.966) ಪ್ರಥಮ ಸ್ಥಾನದೊಂದಿಗೆ ಚಿನ್ನ ಪಡೆದರು. ರಶ್ಯದ ಮರಿಯ ಪಸೆಕಾ (15.253) ಎರಡನೆ ಮತ್ತು ಸ್ವಿಟ್ಝರ್ಲೆಂಡ್‌ನ ಜುಲಿಯಾ ಸ್ಟಿಯೆನ್ ಗ್ರೊಬೆರ್(15.216)ಮೂರನೆ ಸ್ಥಾನದೊಂದಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಹಂಚಿಕೊಂಡಿದ್ದರು.
ತ್ರಿಪುರಾದ ಜಿಮ್ನಾಸ್ಟ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಎಂಟನೆ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು.
ದೀಪಾ ‘ಪ್ರೊಡುನೋವಾ ವಾಲ್ಟ್’ನಲ್ಲಿ ಯಶಸ್ವಿಯಾಗಿ ಫೈನಲ್ ತಲುಪಿದ್ದರು.ಫೈನಲ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿ ಕೆಳಗಿಳಿಯುತ್ತಿದ್ದಾಗ ಎಡವಟ್ಟು ಮಾಡಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಅಂಕಗಳು ಕಡಿಮೆ ಸಿಕ್ಕಿತು. ಪದಕ ತಪ್ಪಲು ಇದು ಕಾರಣವಾಗಿತ್ತು.
ಯಾವುದೇ ವಿದೇಶಿ ಕೋಚ್ ನೆರವು ಇಲ್ಲದೆ ತನ್ನ ಸ್ವಂತ ಕೋಚ್ ಭಾರತದ ಬಿಶ್ವೇಶ್ವರ ನಂದಿ ಮಾರ್ಗದರ್ಶನದಲ್ಲಿ ದೀಪಾ ತಯಾರಿ ನಡೆಸಿದ್ದರು. ತಯಾರಿ ಹೆಚ್ಚು ಸಮಯ ಇರಲಿಲ್ಲ. ಭಾರತದಲ್ಲಿ ಕೇವಲ 3 ತಿಂಗಳ ಅವಧಿಯಲ್ಲಿ ತರಬೇತಿ ನಡೆಸಿಅಪೂರ್ವ ಸಾಧನೆ ಮಾಡಿದ್ದರು.
.