ಕಡಬ: ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ

Update: 2016-08-15 11:34 GMT

ಕಡಬ, ಆ.15. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಡಬ ಇದರ ನೇತೃತ್ವದಲ್ಲಿ ಕಡಬ ವಿಶೇಷ ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಕಡಬ ಪೊಲೀಸ್ ಠಾಣೆ, ರೋಟರಿ ಕ್ಲಬ್ ಕಡಬ, ಲಯನ್ಸ್ ಕ್ಲಬ್ ಕಡಬ, ಜೇಸಿಐ ಕಡಬ ಕದಂಬ, ಕದಂಬ ಆಟೊ ಚಾಲಕ ಮಾಲಕರ ಸಂಘ, ವರ್ತಕರ ಸಂಘ ಕಡಬ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಡಬ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಪರಿಸರದ ಶಾಲಾ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಡಬ ಬಸ್ ನಿಲ್ದಾಣದ ಬಳಿ ಸೇರಿ ಬಳಿಕ ಮೆರವಣಿಗೆಯ ಮೂಲಕ ಕಡಬ ವಿಶೇಷ ತಹಶೀಲ್ದಾರ್ ಕಚೇರಿಗೆ ತೆರಳಿದರು. ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾರತಾಂಬೆಯ ವೇಷ ಧರಿಸಿದ್ದು ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಉತ್ಸಾಹದಿಂದ ವಿದಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಳಿಕ ಕಡಬ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ಕಡಬ ವಿಶೇಷ ತಹಶೀಲ್ದಾರ್ ಬಿ. ಲಿಂಗಯ್ಯ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಕಡಬ ಪೊಲೀಸರಿಂದ ವಿಶೇಷ ಪರೇಡ್ ನಡೆಯಿತು. ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಪ್ರಧಾನ ಬಾಷಣ ಮಾಡಿದ ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಮಾತನಾಡಿ, ಹಿರಿಯರು ಹೋರಾಟದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಆದರೆ ನಾವು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸ್ವಾತಂತ್ರ್ಯೋತ್ಸವವನ್ನು ಆಚರಿಸುವಲ್ಲಿ ಬಿಗಿ ಭದ್ರತೆ ಬೇಕು ಎನ್ನುವಂತಾದರೆ ದೇಶದಲ್ಲಿ ಎಷ್ಟರ ಮಟ್ಟಿಗೆ ಸ್ವಾತಂತ್ರ ಇದೆ ಎನ್ನುವುದನ್ನು ಅವಲೋಕಿಸಬೇಕಾಗುತ್ತದೆ. ವಿದ್ಯಾವಂತ ಯುವ ಜನತೆ ದೇಶ ವಿರೋಧಿ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ ಎನ್ನುವುದು ದುರಂತದ ವಿಚಾರ. ನಮ್ಮ ಶಿಕ್ಷಣದಲ್ಲಿ ಇಂದು ಸಂಸ್ಕಾರ ಇಲ್ಲದೇ ಇರುವುದರಿಂದಲೇ ಈ ಅನಾಹುತಗಳು ಆಗುತ್ತಿದ್ದು, ನಾವು ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕವಾದ ಸೈದ್ಧಾಂತಿಕ ನೆಲೆಗಟ್ಟಿನಿಂದ ಹೊರ ಬಂದು ಅಂತರಿಕವಾಗಿ ಒಂದಾದರೆ ಬಾಹ್ಯ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ಫಝಲ್ ಕೋಡಿಂಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿ, ಗ್ರಾಮ ಸೇವಕ ಉದಯಕುಮಾರ್ ವಂದಿಸಿದರು. ಸರ್ವೇಯರ್ ಪ್ರಭಾಕರ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News