×
Ad

ದೇಶದ ಆಂತರಿಕ ಪಿಡುಗುಗಳ ವಿರುದ್ಧ ನಾವು ಧ್ವನಿಯೆತ್ತಬೇಕು: ಡಾ. ರಾಜೇಂದ್ರ ಕೆ.ವಿ.

Update: 2016-08-15 17:26 IST

ಪುತ್ತೂರು, ಆ.15: ದೇಶದ ಆಂತರಿಕ ಪಿಡುಗುಗಳಾದ ಸಾಮಾಜಿಕ ಅಸಮಾನತೆಯ ವಿರುದ್ದ ನಾವೆಲ್ಲ ಧ್ವನಿಯೆತ್ತಬೇಕಾಗಿದ್ದು, ಭಯೋತ್ಪಾದನೆ, ದಲಿತ ಸಮುದಾಯಗಳ ಮೇಲಿನ ದೌರ್ಜನ್ಯ ಇವುಗಳಿಗೆ ಕಡಿವಾಣ ಹಾಕುವ ಮೂಲಕ ಸಮಾನತೆ ಸಾರಬೇಕಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿದೆ ಎಂದು ಪುತ್ತೂರು ಉಪವಿಬಾಗದ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಕಿಲ್ಲೆ ಮೈದಾನದ ಪೆರೇಡ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು 70ನೇ ಸ್ವಾತಂತ್ರೋತ್ಸವದ ರಾಷ್ಟ್ರ ಧ್ವಜಾರೋಹಣ ನಡೆಸಿ,ಭದ್ರತಾ ಪಡೆಗಳ ಗೌರವ ರಕ್ಷೆ ಸ್ವೀಕರಿಸಿ ಸಂದೇಶ ನೀಡಿದರು.

ಭಾರತವು ಪ್ರಸ್ತುತ ಹಲವಾರು ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಿದ್ದು, ಜಗತ್ತಿನ ಶಕ್ತಿ ಕೇಂದ್ರವಾಗುವತ್ತ ದಾಪುಗಾಲು ಇಡುತ್ತಿದೆ. ಐಟಿ, ಬಿಟಿ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ವಿಜ್ಞಾನ, ರಕ್ಷಣೆ, ಶಿಕ್ಷಣ, ಆರೋಗ್ಯ ಮುಂತಾದುವುಗಳಲ್ಲಿ ದೇಶ ಅಮೋಘ ಸಾಧನೆ ಮಾಡುತ್ತಿದೆ. ಗಡಿಯಲ್ಲಿದ್ದುಕೊಂಡು ದೇಶ ಕಾಯುವುದು ಮಾತ್ರ ದೇಶಭಕ್ತಿಯಲ್ಲ, ಪ್ರತಿಯೊಬ್ಬ ಪ್ರಜೆಯೂ ತನ್ನ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ, ನಿರ್ವಂಚನೆಯಿಂದ, ನಿಷ್ಠೆಯಿಂದ ಮಾಡೋದೆಲ್ಲ ದೇಶ ಸೇವೆಯೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಸೈನಿಕನಾಗಬೇಕು ಎಂದರು.

ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಎನ್‌ಸಿಸಿ, ಸ್ಕೌಟ್ಸ್- ಗೈಡ್ಸ್, ಹೋಂ ಗಾರ್ಡ್ ತುಕಡಿಗಳಿಂದ ಎಸಿ ಅವರು ಗೌರವ ರಕ್ಷೆ ಸ್ವೀಕರಿಸಿದರು. ಶಾಸಕಿ ಶಕುಂತಳಾ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್, ತಹಶೀಲ್ದಾರ್ ಪುಟ್ಟ ಶೆಟ್ಟಿ, ಎಎಸ್ಪಿ ರಿಷ್ಯಂತ್ ಸಿ.ಬಿ., ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪೆರೇಡ್‌ನಲ್ಲಿ ಬಾಗವಹಿಸಿದರು.

ಬಳಿಕ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ, ದೇಶವನ್ನು ರಕ್ಷಿಸಲು ಬಲಿದಾನ ಮಾಡಿರುವ ಎಳೆಯ ಪ್ರಾಯದ ಯುವಕರ ತ್ಯಾಗವನ್ನು ಯುವ ಸಮುದಾಯಕ್ಕೆ ಅರ್ಥೈಸುವ ಕೆಲಸವನ್ನು ಮಾಡಬೇಕಾಗಿದೆ. ಯುವ ಸಮುದಾಯಗಳು ಈ ವೌಲ್ಯವನ್ನು ಅರಿಯದಿದ್ದಲ್ಲಿ ಸ್ವಾತಂತ್ರದ ದುರ್ಬಳಕೆ ಆದೀತು ಎಂದು ಎಚ್ಚರಿಸಿದರು.

ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಮುಖ್ಯಭಾಷಣ ಮಾಡುತ್ತಾ ಅಮೆರಿಕಾದ ಪ್ರಗತಿಗೆ ಎರಕ ಹೊಯ್ದು ನಮ್ಮ ದೇಶದ ಪ್ರಗತಿಯನ್ನು ಸಮೀಕರಿಸಿದರೆ ನಿಜವಾದ ಭಾರತೀಯತೆ ನಾಶವಾಗಬಹುದು. ಇವತ್ತು ಸ್ವಾತಂತ್ರ ಹೋರಾಟಗಾರನ್ನು ಕೂಡ ವಿಭಾಗ ಮಾಡಿಕೊಂಡು ತಮ್ಮ ತಮ್ಮ ಪಂಗಡಗಳ ಹೀರೊ ಎಂದು ಬಿಂಬಿಸಿಕೊಳ್ಳುವ ದುರ್ಗತಿ ನಮ್ಮಲ್ಲಿದೆ. ಆವತ್ತು ದೇಶ ವಿಭಜನೆ ಆಗಿದ್ದಲ್ಲ, ನಮ್ಮ ಮನಸುಗಳ ವಿಭಜನೆ ಆಗಿದ್ದು. ಆ ಮನೋಸ್ಥಿತಿ ಇವತ್ತಿಗೂ ಮುಂದುವರಿದಿದೆ. ಈ ಮನೋಸ್ಥಿತಿ ಬದಲಾಗಿ ಭಾರತೀಯರೆಲ್ಲಾ ಒಂದೇ ಎಂಬ ಮನೋಬಾವ ಸೃಷ್ಟಿಯಾಗಬೇಕಿದೆ ಎಂದರು.

ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ತಿದ್ದುಪಡಿ ತರುವುದು ತಪ್ಪಲ್ಲ. ಅದು ಕಾಲಕ್ಕೆ ತಕ್ಕಂಥ ಕ್ರಮ. ಆದರೆ ಅಂಬೇಡ್ಕರ್ ಬರೆದ ಸಂವಿಧಾನವೇ ಸರಿಯಿಲ್ಲ ಎಂದು ಹೇಳೋದು ದೇಶದ ಪರಂಪರೆಗೆ ಮಾಡಿದ ಅಪಚಾರ. ಜಾತಿ ಸಂಘಟನೆಗಳು ದೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ರಾಜಕೀಯದಲ್ಲಿ ಧರ್ಮ ಇದ್ದರೆ ಅದು ಶುದ್ಧವಾದೀತು. ಆದರೆ ಧರ್ಮದಲ್ಲಿ ರಾಜಕೀಯ ತಂದಲ್ಲಿ ದೇಶಕ್ಕೆ ಅಪಾಯ ಎಂದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಲೆಫ್ಟಿನೆಂಟ್ ಕರ್ನಲ್ ರಮಾಕಾಂತನ್ ಮತ್ತು ವಾರಂಟ್ ಆಫೀಸರ್ ಕೆ.ಜೆ. ವಸಂತ ಗೌಡ ಅವರನ್ನು ಸನ್ಮಾನಿಸಿ ಗೌರವಿಲಾಯಿತು.

ಇತ್ತೀಚೆಗೆ ಉಪ್ಪಿನಂಗಡಿ ಸಮೀಪ ನಡೆದ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರೊಂದಿಗೆ ಸಹಕರಿಸಿದ ಕೋಲ್ಪೆ ಪರಿಸರದ ನಿವಾಸಿಗಳಾದ ಇಸ್ಮಾಯೀಲ್, ಕೆ.ಎಂ. ಹನೀಫ್, ಸಲೀಂ ಎಂ.ಕೆ., ಜಾವೇದ್, ರಫೀಕ್, ರಾಜೇಶ್ ಮತ್ತು ಗಣೇಶ್ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಉಪ ವಿಭಾಗಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಎಎಸ್‌ಪಿ ರಿಷ್ಯಂತ್ ಸಿ.ಬಿ., ಪುಡಾ ಅಧ್ಯಕ್ಷ ಬೆಟ್ಟ ಈಶ್ವರ ಭಟ್ ಉಪಸ್ಥಿತರಿದ್ದರು. ತಹಶೀಲ್ದಾರ್ ಪುಟ್ಟ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ವಂದಿಸಿದರು. ಪ್ರೊ. ಬಿ.ಜೆ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸಬಾ ಕಾರ್ಯಕ್ರಮದ ಬಳಿಕ ಎಂಟು ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News