ಸ್ವಾತಂತ್ರವನ್ನು ಉಳಿಸುವ ಕೆಲಸ ಭಾರತೀಯರಿಂದಾಗಬೇಕು: ಶಯನಾ ಜಯಾನಂದ್

Update: 2016-08-15 12:35 GMT

ಉಪ್ಪಿನಂಗಡಿ, ಆ.15: ಸ್ವಾತಂತ್ರ ದಿನದಂದು ಭಾರತೀಯರ ಮನೆಯಲ್ಲಿ ಹಬ್ಬದ ವಾತಾವರಣ ಮೂಡಬೇಕು. ನಮ್ಮ ಹಿರಿಯರ ತ್ಯಾಗ-ಬಲಿದಾನದಿಂದ, ಶತ್ರುಗಳ ಗುಂಡಿಗೆ ಎದೆಕೊಡುವ ಕೆಚ್ಚೆದೆಯ ಸೈನಿಕರಿಂದಾಗಿ ನಾವಿಂದು ಸುಖ ನಿದ್ರೆ ಮಾಡುವಂತಾಗಿದ್ದು, ಅವರನ್ನು ನೆನಪು ಮಾಡುವುದರೊಂದಿಗೆ ದೇಶದ ಸ್ವಾತಂತ್ರವನ್ನು ಉಳಿಸುವ ಕೆಲಸ ಭಾರತೀಯರಿಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್ ತಿಳಿಸಿದರು.

ಉಪ್ಪಿನಂಗಡಿ ಸ್ವಾತಂತ್ರೋತ್ಸವ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಗುರು ಸುಧೀಂದ್ರ ಕಲಾ ಮಂದಿರದಲ್ಲಿ ನಡೆದ 70ನೆ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರಿದ ದೇಶವಾಗಿದ್ದು, ಇನ್ನು ಮುಂದೆಯೂ ನಮ್ಮೊಳಗಿನ ಸೌಹಾರ್ದಕ್ಕೆ ಧಕ್ಕೆ ಬಾರದಂತೆ ನಾವೆಲ್ಲಾ ಭಾರತೀಯರು ಎಂಬ ಮನೋಭಾವದಡಿ ದೇಶದ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿಯಲ್ಲಿ ಭಾರತವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಿದ್ಯಾಧರ ಬಿ. ದಂಪತಿಯನ್ನು ಇನ್ನೋರ್ವ ನಿವೃತ್ತ ಯೋಧ ಎಂ.ಕೆ.ಎನ್. ಭಟ್ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ನಿವೃತ್ತ ಯೋಧ ವಿದ್ಯಾಧರ ಬಿ., ಸ್ವಾತಂತ್ರ್ಯವೆಂಬುದು ನಮಗೆ ಬಳುವಳಿಯಾಗಿ ಬಂದಿಲ್ಲ. ಇದರ ಹಿಂದೆ ಅನೇಕರ ತ್ಯಾಗ- ಬಲಿದಾನವಿದೆ. ಇಂದು ಕೂಡಾ ದೇಶದ ಗಡಿ ಪ್ರದೇಶಗಳಲ್ಲಿ ಮಳೆ-ಗಾಳಿ, ಚಳಿಯನ್ನು ಲೆಕ್ಕಿಸದೇ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೋರ್ವ ಭಾರತೀಯನಿಗೂ ದೇಶಾಭಿವೃದ್ಧಿಯ ಕರ್ತವ್ಯಗಳಿದ್ದು, ಇದನ್ನು ಮರೆಯದೇ ಪ್ರತಿಯೋರ್ವರೂ ಸಮೃದ್ಧ, ಸದೃಢ ಭಾರತಕ್ಕೆ ಕೊಡುಗೆ ನೀಡಿದರೆ ಭಾರತ ವಿಶ್ವಗುರುವಾಗಿ ಮೆರೆಯಲಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಸುಜಾತ ಕೃಷ್ಣ ಆಚಾರ್ಯ, ಮುಕುಂದ ಗೌಡ ಬಿ., ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸ್ವಾತಂತ್ರ್ಯೋತ್ಸವ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಡಿ. ವಂದಿಸಿದರು. ಪತ್ರಕರ್ತ ಉದಯಕುಮಾರ್ ಯು.ಎಲ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News