ಉಪ್ಪಿನಂಗಡಿ: ಸ್ವಾತಂತ್ರ್ಯೋತ್ಸವಕ್ಕೆ ಸಮವಸ್ತ್ರ ಧರಿಸದೆ ಪ್ರತಿಭಟಿಸಿದ ವಿದ್ಯಾರ್ಥಿಗಳು!

Update: 2016-08-15 13:01 GMT

ಉಪ್ಪಿನಂಗಡಿ, ಆ.15: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳಾಗುತ್ತ ಬಂದರೂ ಸರಕಾರ ಇನ್ನೂ ಸಮವಸ್ತ್ರ ನೀಡದಿರುವುದನ್ನು ಖಂಡಿಸಿದ ಇಲ್ಲಿನ ಪುಳಿತ್ತಡಿ ಮಠದ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ ದಿನದಂದು ಪ್ರತಿಭಟನಾರ್ಥವಾಗಿ ಸಮವಸ್ತ್ರ ಧರಿಸದೆ ಶಾಲೆಗೆ ಆಗಮಿಸಿ 70ನೆ ಸ್ವಾತಂತ್ರೋತ್ಸವ ದಿನವನ್ನು ಆಚರಿಸಿದರು.

ಈ ಮೊದಲೇ ನಿರ್ಧಾರವಾದಂತೆ ಸರಕಾರದ ವಿರುದ್ಧ ಪ್ರತಿಭಟನಾತ್ಮಕವಾಗಿ ಸಮವಸ್ತ್ರ ಧರಿಸದೇ ವಿವಿಧ ಬಣ್ಣಗಳ ಬಟ್ಟೆಬರೆಗಳನ್ನು ತೊಟ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು.

ಧ್ವಜಾರೋಹಣಗೈದು ಸ್ವಾತಂತ್ರೋತ್ಸವದ ಶುಭಾಷಯ ತಿಳಿಸಿದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೇಶವ ರಂಗಾಜೆ, ಶಾಲೆ ಆರಂವಾಗಿ ಮೂರು ತಿಂಗಳಾಗುತ್ತಾ ಬಂದರೂ ಸರಕಾರದಿಂದ ಮಾತ್ರ ಇನ್ನೂ ಸಮವಸ್ತ್ರ ಬಂದಿಲ್ಲ. ಸರಕಾರವು ಎಲ್ಲಾ ರೀತಿಯಲ್ಲೂ ಸರಕಾರಿ ಶಾಲೆಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರಲ್ಲದೆ, ಸರಕಾರದ ಈ ಉದಾಸೀನತೆಯ ಧೋರಣೆಯನ್ನು ಪ್ರತಿಭಟಿಸುವುದಕ್ಕಾಗಿ ಈ ಬಾರಿಯ ಸ್ವಾತಂತ್ರ ದಿನದಂದು ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ಧರಿಸದೆ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಬಳಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುನೀಲ್ ಕುಮಾರ್ ದಡ್ಡು, ಇಬ್ರಾಹೀಂ ಕುಕ್ಕುಜೆ, ಎಸ್‌ಡಿಎಂಸಿಯ ಪ್ರಮುಖರಾದ ಉದಯ ಅತ್ರೆಮಜಲು, ಬಾಬು ನೆಡ್ಚಿಲು, ಧರ್ನಪ್ಪನಾಯ್ಕ, ಸೇಸಪ್ಪ ಬೊಳ್ಳಾವು, ಲಕ್ಷ್ಮಣ ನೆಡ್ಚಿಲು, ರಾಮಚಂದ್ರ ನೆಡ್ಚಿಲು, ರಾಜೇಶ್ ಕಜೆಕ್ಕಾರು, ಪ್ರೇಮ ಬಲ್ಯಾರಬೆಟ್ಟು, ರವಿ ಬಲ್ಯಾರಬೆಟ್ಟು, ಕಮಲಾಕ್ಷಿ ಬೊಳ್ಳಾವು, ಶಾಂತಿಕಿರಣ, ನೋಣಯ್ಯ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಸೇಸಪ್ಪ ಗೌಡ ಸ್ವಾಗತಿಸಿದರು. ವಿಶ್ವೇಶ್ವರ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News