ದೇಶದ ಅಖಂಡತೆ ಉಳಿಸಬೇಕಿದೆ: ಸುನಿಲ್‌ಕುಮಾರ್

Update: 2016-08-15 13:03 GMT

ಕಾರ್ಕಳ, ಆ.15: ಹಲವು ವರ್ಷಗಳ ನಿರಂತರ ಹೋರಾಟ, ಅಸಂಖ್ಯಾತ ದೇಶಭಕ್ತರ ಕಾಂತ್ರಿಕಾರಿ ಚಳುವಳಿಯಿಂದ ಹಾಗೂ ಕಠಿಣ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಪ್ರಸಕ್ತ ದಿನಗಳಲ್ಲಿ ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವ ಸಮಾಜಘಾತುಕ ಶಕ್ತಿಗಳು ತಲೆ ಎತ್ತಿದ್ದು ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ದೇಶದ ಅಖಂಡತೆ ಹಾಗೂ ಸಾರ್ವಭೌಮತೆಯನ್ನು ಉಳಿಸಬೇಕಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ವಿಪಕ್ಷ ಮುಖ್ಯ ಸಚೇತಕ ವಿ.ಸುನಿಲ್‌ಕುಮಾರ್ ಹೇಳಿದರು.

ಅವರು ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ 70ನೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಸಲ್ಲುತ್ತಿರುವ ಈ ಕಾಲಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಲ್ಲಿ ಬದಲಾವಣೆ ಕಂಡಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹಾನ್ ವ್ಯಕ್ತಿಗಳನ್ನು ನಾವು ವರ್ಷಪೂರ್ತಿ ನೆನಪಿಸಲೇಬೇಕು. ಅವರ ತ್ಯಾಗದಿಂದ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎನ್ನುವ ಪರಿಜ್ಞಾನ ನಮಗಿದ್ದರೆ ಯಾರೂ ದೇಶದ್ರೋಹದ ಕೆಲಸಗಳಿಗೆ ಮುಂದಾಗುತ್ತಿರಲಿಲ್ಲ ಎಂದರು.

2015-16ನೆ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿಯೇ ಅತ್ಯಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಎಸ್. ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಉಡುಪಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸಮಿತ್ ಶೆಟ್ಟಿ ಕೌಡೂರು, ದಿವ್ಯಶ್ರೀ ಅಮೀನ್, ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್ ಮೊದವಾದವರು ಉಪಸ್ಥಿತರಿದ್ದರು.

ತಹಶೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿದರು. ಎಚ್.ಕೆ.ಗಣಪಯ್ಯ, ಬಾಬು ಪೂಜಾರಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News