ತ್ರಿವರ್ಣ ಧ್ವಜದಡಿ ನಾವೆಲ್ಲರೂ ಒಂದೇ: ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ

Update: 2016-08-15 13:18 GMT

ಮಂಗಳೂರು, ಆ.15: ದೇಶದ ವಿವಿಧ ರಾಜ್ಯಗಳ ಭಾಷೆ, ಸಂಸ್ಕೃತಿ, ಹಾವಭಾವ, ಆಹಾರ ಪದ್ಧತಿ ಎಲ್ಲವೂ ವಿಭಿನ್ನವಾಗಿದ್ದರೂ ತ್ರಿವರ್ಣ ಧ್ವಜದಡಿ ಭಾರತೀಯರಾದ ನಾವೆಲ್ಲರೂ ಒಂದೇ ಹಾಗೂ ದೇಶದ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸದಾ ಸಿದ್ಧರಾಗಿರುತ್ತೇವೆ ಎಂದು ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ರಾಜೀವ್ ಪ್ರತಾಪ್ ರೂಡಿ ಅಭಿಪ್ರಾಯಿಸಿದ್ದಾರೆ.

ಅವರು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ‘ಸ್ವಾತಂತ್ರ್ಯ 70-ಬಲಿದಾನ ಸ್ಮರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಅಖಂಡ ಭಾರತ ನಮ್ಮದಾಗಿದ್ದು, ಇದರ ವಿಭಜನೆಗೆ ಯಾವುದೇ ಅವಕಾಶ ನೀಡುವುದಿಲ್ಲ. ನಮ್ಮನ್ನು ವಿಭಜಿಸಲು ಮುಂದಾಗುವ ಶಕ್ತಿಗಳನ್ನು ಒಗ್ಗಟ್ಟಾಗಿ ಹಿಮ್ಮೆಟ್ಟಿಸಲು ನಾವು ಸದಾ ಸಿದ್ಧ. ನಮ್ಮ ತ್ರಿವರ್ಣ ಧ್ವಜದ ರಕ್ಷಣೆಗೆ ಸೇನಾ ಜವಾನರಿಂದ ಮೊದಲ್ಗೊಂಡು ಪ್ರತಿಯೊಬ್ಬ ನಾಗರಿಕನೂ ಯಾವುದೇ ಬಲಿದಾನಕ್ಕೆ ಸಿದ್ಧ ಎಂಬುದನ್ನು ಅನೇಕ ಸಂದರ್ಭಗಳು ಸಾಬೀತುಪಡಿಸಿವೆ ಎಂದವರು ಹೇಳಿದರು.

ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮಾಗಾಂಧೀಜಿಯ ಜತೆಯಲ್ಲೇ ರವೀಂದ್ರನಾಥ್ ಟಾಗೋರ್, ಇಕ್ಬಾಲ್‌ರವರು ತಮ್ಮ ಕವಿತೆಗಳ ಮೂಲಕ ಸ್ವಾತಂತ್ರ ಸಂಗ್ರಾಮ ನಡೆಸಿದ್ದರೆ, ಭಾಗದ ಉಳ್ಳಾಲದ ರಾಣಿ ಅಬ್ಬಕ್ಕ, ಕಾರ್ನಾಡು ಸದಾಶಿವ ರಾವ್, ಕಡಿದಾಳು ಮಂಜಪ್ಪ , ಕೆ.ಕೆ.ಶೆಟ್ಟಿ ಮೊದಲಾದವರು ಮಾಡಿರುವ ತ್ಯಾಗ ಮತ್ತುಬಲಿದಾನವನ್ನು ನಾವಿಂದು ನೆನಪಿಸಿಕೊಳ್ಳಬೇಕಾಗಿದೆ. ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಂತೆ, ಹಿರಿಯ ಸ್ವಾತಂತ್ರ ಹೋರಾಟಗಾರರನ್ನು ಭೇಟಿ ಮಾಡಿ ಅವರನ್ನು ಗೌರವಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಿನ್ನೆ ಕೇರಳಕ್ಕೆ ಭೇಟಿ ನೀಡಿ ಅಲ್ಲಿನ 102ರ ಹರೆಯದ ಕೆ. ಮಾಧವನ್ ಎಂಬ ಸ್ವಾತಂತ್ರ ಹೋರಾಟಗಾರರನ್ನು ನೋಡಿ ಆಶೀರ್ವಾದ ಪಡೆಯುವ ಅವಕಾಶ ತನಗೆ ದೊರಕಿರುವುದು ಖುಷಿ ತಂದಿದೆ ಎಂದು ಸಚಿವ ರೂಡಿ ಹೇಳಿದರು.

70 ವರ್ಷಗಳ ಹಿಂದೆ ನಮ್ಮ ಅನೇಕ ಹಿರಿಯರು ನಾನಾ ರೀತಿಯಲ್ಲಿ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನಗೈದಿದ್ದಾರೆ. ಆ ಬಲಿದಾನವನ್ನು ಸ್ಮರಿಸಿಕೊಳ್ಳುವ ಜತೆಗೆ, ಅವರ ಬಲಿದಾನದ ಶ್ರಮವನ್ನು ಉಳಿಸುವ ಕಾರ್ಯವನ್ನೂ ನಾವು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 50 ರಾಷ್ಟ್ರಗಳಿಗೆ ಪ್ರವಾಸ ಮಾಡಿ ಭಾರತದ ಪತಾಕೆಯನ್ನು ಹಾರಿಸಿದ್ದಾರೆ. ಡಿಜಿಟಲ್ ಇಂಡಿಯಾದ ಮೂಲಕ ಭಾರತ ಅಭಿವೃದ್ಧಿ ಪಥದಲ್ಲಿ ಶರವೇಗದಲ್ಲಿ ಸಾಗುತ್ತಿದೆ. ಹಿಂದೆ ದಿನವೊಂದಕ್ಕೆ 1ರಿಂದ 2 ಕಿಮೀ ರಸ್ತೆ ಅಭಿವೃದ್ದಿಯಾಗುತ್ತಿದೆ, ಪ್ರಸಕ್ತ ಕೇಂದ್ರ ಸರಕಾರದ ನೇತೃತ್ವದಲ್ಲಿ ದಿನವೊಂದಕ್ಕೆ 18ಕಿ.ಮೀ.ನಿಂದ 30 ಕಿ.ಮೀ. ವೇಗದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಸಮಗ್ರ ರಸ್ತೆ ಸಂಪರ್ಕ, ನೀರು, ವಿದ್ಯುತ್ ಸಂಪರ್ಕ, ಆರೋಗ್ಯ ಹಾಗೂ ಶಿಕ್ಷಣವನ್ನು ಒದಗಿಸುವುದು ಕೇಂದ್ರ ಸರಕಾರದ ಪ್ರಮುಖ ಆದ್ಯತೆ ಎಂದವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡದ ಸಂಸತ್ ಸದಸ್ಯ ನಳಿನ್‌ಕುಮಾರ್ ಕಟೀಲು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 2020ರ ವೇಳೆಗೆ ಭಾರತ ಜಗದ್ಗುರು ಆಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಜಗತ್ತು ಭಾರತದ ಕಡೆಗೆ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರ ನಡುವೆಯೂ ಭಾರತದ ವಿರುದ್ಧ ಏಳುವ ಧ್ವನಿಯನ್ನು ದಮನಿಸುವಲ್ಲಿ ದೇಶ ಪರ ನಮ್ಮ ಧ್ವನಿಯನ್ನು ಪ್ರಬಲಗೊಳಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮಹಾ ನಗರಪಾಲಿಕೆಯ ಉಪ ಮೇಯರ್ ಸುಮಿತ್ರಾ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಉಪಸ್ಥಿತರಿದ್ದರು.

ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಜಿಲ್ಲಾ ಬಿಜಿಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡುಬಿದಿರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News