ಅಫ್ಘಾನ್‌ನ ಬಾಗ್ಲಾನ್ ಜಿಲ್ಲೆ ತಾಲಿಬಾನ್ ವಶ
ಕುಂಡುಝ್,ಆ.15: ಅಫ್ಘಾನಿಸ್ತಾನದಲ್ಲಿ ನ್ಯಾಟೋ ನೇತೃತ್ವದ ಮಿತ್ರಪಡೆಗಳ ವಿರುದ್ಧ ಹೋರಾಡುತ್ತಿರುವ ತಾಲಿಬಾನ್ ಬಂಡುಕೋರರು ಉತ್ತರದ ಬಾಗ್ಲಾನ್ ಪ್ರಾಂತ್ಯದ ಪ್ರಮುಖ ಜಿಲ್ಲೆಯೊಂದನ್ನು ವಶಪಡಿಸಿಕೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಈವರೆಗೆ ತಾಲಿಬಾನ್ ದಕ್ಷಿಣ ಹಾಗೂ ಪೂರ್ವ ಅಫ್ಘಾನಿಸ್ತಾನದಲ್ಲಿ ಪ್ರಬಲವಾಗಿದ್ದು, ಇದೀಗ ಬಾಗ್ಲಾನ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ಮೂಲಕ ಉತ್ತರದಲ್ಲೂ ತನ್ನ ಬಂಡುಕೋರ ಚಟುವಟಿಕೆಗಳನ್ನು ವಿಸ್ತರಿಸಿದಂತಾಗಿದೆ. ಅಮೆರಿಕ ಹಾಗೂ ಅಫ್ಘಾನ್ ಯುದ್ಧ ವಿಮಾನಗಳ ನೆರವಿನ ಹೊರತಾಗಿಯೂ, ಸರಕಾರಿ ಪಡೆಗಳು ತಾಲಿಬಾನ್ ಬಂಡುಕೋರರನ್ನು ಹಿಮ್ಮೆಟ್ಟಿಸಲು ವಿಫಲವಾಗಿವೆ. ಬಂಡುಕೋರರು ಉತ್ತಮವಾಗಿ ತರಬೇತಿಯನ್ನು ಪಡೆದಿದ್ದಾರೆ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಡಿತರಾಗಿದ್ದಾರೆಂದು ಅಘ್ಘಾನಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿಕೆಯೊಂದನ್ನು ನೀಡಿ, ಬಾಗ್ಲಾನ್ ಪ್ರಾಂತದ ಜಿಲ್ಲೆಯೊಂದನ್ನು ತನ್ನ ಗುಂಪು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿದ್ದಾರೆ.
ಕಾಳಗದಲ್ಲಿ ಹಲವಾರು ಅಫ್ಘಾನ್ ಸೈನಿಕರು ಹಾಗೂ ಬಂಡುಕೋರರು ಸಾವನ್ನಪ್ಪಿದ್ದು, 33 ಯೋಧರನ್ನು ಸೆರೆಹಿಡಿಯಲಾಗಿದೆಯೆಂದು ಮುಜಾಹಿದ್ ತಿಳಿಸಿದ್ದಾನೆ.