ಹಲಾಲ್ ಮಾಡದ ಮಾಂಸ ಮಾರಾಟದ ಆರೋಪ: ವಿವರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ ಕೆಎಫ್‌ಸಿ

Update: 2016-08-15 18:57 GMT

ಮಂಗಳೂರು, ಆ.15: ಕೆಎಫ್‌ಸಿ ಮಳಿಗೆಗಳಲ್ಲಿ ಹಲಾಲ್ ಅಲ್ಲದ ಕೋಳಿ ಮಾಂಸ ಬಳಸಿ ಆಹಾರೋತ್ಪನ್ನಗಳನ್ನು ತಯಾರಿಸುತ್ತಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೆಎಫ್‌ಸಿ ಬೆಂಗಳೂರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್‌ಒ)ಯನ್ನು ‘ವಾರ್ತಾಭಾರತಿ’ ಸಂಪರ್ಕಿಸಿದಾಗ ಅವರು ವಿವರ ನೀಡಲು ಸಮಯಾವಕಾಶ ಬೇಕೆಂದು ಹೇಳಿದ್ದಾರೆ.
‘‘ಉತ್ತರ ಪ್ರದೇಶದ ಬರೇಲಿಯಲ್ಲಿರುವ ಕೆಎಫ್‌ಸಿ ಮಳಿಗೆಯಲ್ಲಿ ಹಲಾಲ್ ಅಲ್ಲದ ಕೋಳಿ ಮಾಂಸ ಬಳ ಸುತ್ತಿದ್ದು, ಅವುಗಳಿಂದ ಸಿದ್ಧಪಡಿಸಿದ ಆಹಾರೋತ್ಪನ್ನ ಗಳನ್ನು ಸೇವಿಸುವುದು ಮುಸ್ಲಿಮರಿಗೆ ನ್ಯಾಯಸಮ್ಮತವಲ್ಲ’’ ಎಂದು ಮುಸ್ಲಿಮ್ ಧಾರ್ಮಿಕ ಗುರುಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಹಿತಿ ಕೋರಿ ‘ವಾರ್ತಾಭಾರತಿ’ಯು ಮಂಗಳೂರಿನಲ್ಲಿರುವ ಕೆಎಫ್‌ಸಿ ಮಳಿಗೆಯನ್ನು ಸಂಪರ್ಕಿಸಿದಾಗ ಬೆಂಗಳೂರಿನ ಪಿಆರ್‌ಒ ಅವರಲ್ಲಿ ಮಾತನಾಡುವಂತೆ ಸೂಚಿಸಿದರು. ಅದರಂತೆ ಪಿಆರ್‌ಒ ಪ್ರಿಯಾ ಧವನ್ ಅವರನ್ನು ಸಂಪರ್ಕಿಸಿದಾಗ, ‘‘ಕೆಎಫ್‌ಸಿಯಲ್ಲಿ ಲಭ್ಯವಿರುವ ಕೋಳಿ ಮಾಂಸ ಹಲಾಲ್ ಅಲ್ಲ ಎಂಬುದು ಸುಳ್ಳು. ನಮಗೆ ಸರಬರಾ ಜಾಗುವ ಮಾಂಸ ಹಲಾಲ್ ಎಂಬುದಕ್ಕೆ ನಾವು ಅಧಿಕೃತ ಪ್ರಮಾಣಪತ್ರವನ್ನು ಪಡೆದಿದ್ದೇವೆ’’ ಎಂದು ಸ್ಪಷ್ಟನೆ ನೀಡಿದರು. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಅವರು, ಇ-ಮೇಲ್ ಮೂಲಕ ಸಂಪರ್ಕಿಸುವಂತೆ ಹೇಳಿದರು. ಅದರಂತೆ ಇ-ಮೇಲ್ ಮೂಲಕ ಪ್ರಶ್ನೆಗಳನ್ನು ಕಳುಹಿಸಿದಾಗ ಅವುಗಳಿಗೆ ಉತ್ತರಿಸಲು ಒಂದು ದಿನದ ಕಾಲಾವಕಾಶ ಅಗತ್ಯವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News