ಇನ್‌ಸ್ಪೆಕ್ಟರ್ ಗಿರೀಶ್ ವಿರುದ್ಧ ಇಲಾಖಾ ವಿಚಾರಣೆ: ಎಸ್ಪಿ ಬಾಲಕೃಷ್ಣ

Update: 2016-08-15 16:02 GMT

ಉಡುಪಿ, ಆ.15: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರಂಭ ದಲ್ಲಿ ತನಿಖಾಧಿಕಾರಿಯಾಗಿದ್ದ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳ ಬಗ್ಗೆ ಮತ್ತು ತನಿಖೆಯಲ್ಲಿ ಆಗಿರುವ ಲೋಪಗಳ ಕುರಿತು ಇಲಾಖೆಯಿಂದ ಆಂತರಿಕ ವಿಚಾರಣೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವರ ಮೇಲೆ ಮಾಡಿರುವ ಎಲ್ಲ ಆರೋಪಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ಮಾಡಲಾಗುತ್ತದೆ. ಅದರಲ್ಲಿ ತಪ್ಪು ಕಂಡುಬಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ಹಂತದಲ್ಲಿ ಎಲ್ಲವನ್ನು ಹೇಳಲು ಆಗಲ್ಲ. ತನಿಖೆ ಪೂರ್ಣಗೊಂಡ ನಂತರ ಎಲ್ಲ ಮಾಹಿತಿ ನೀಡಲಾಗುವುದು. ಗಿರೀಶ್ ಪ್ರಸ್ತುತ ಕರ್ತವ್ಯದಲ್ಲಿದ್ದರೂ ಈ ಪ್ರಕರಣದ ತನಿಖೆಯಲ್ಲಿ ಅವರು ಭಾಗಿಯಾಗಿಲ್ಲ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳಿವು, ಸಾಕ್ಷಗಳು ಸಿಕ್ಕಿವೆ. ಆದರೆ ತನಿಖೆ ಹಂತದಲ್ಲಿ ಎಲ್ಲವನ್ನು ಹೇಳಲು ಆಗಲ್ಲ. ಸದ್ಯಕ್ಕೆ ಐದು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ತನಿಖೆ ಮುಂದುವರೆದಿದೆ. ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಕೆಲವರ ಮೇಲೆ ಸಂಶಯ ವ್ಯಕ್ತಪಡಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಒಟ್ಟಾರೆ ಎಲ್ಲ ಆಯಮಾಗಳಲ್ಲೂ ನಾವು ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದರು.

ತನಿಖಾಧಿಕಾರಿ ಸುಮನಾ ಆರೋಪಿಗಳನ್ನು ಸ್ಟಾರ್ ಹೊಟೇಲಿಗೆ ಕರೆದು ಕೊಂಡು ಹೋಗಿರುವ ಕುರಿತ ಆರೋಪಗಳ ಬಗ್ಗೆ ಅವರಿಂದ ಈಗಾಗಲೇ ಸ್ಪಷ್ಟನೆ ಪಡೆದುಕೊಳ್ಳಲಾಗಿದೆ. ಇದು ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಆ ದಾರಿಯಲ್ಲಿ ಇದ್ದ ಒಂದೇ ಹೊಟೇಲ್ ಅದಾದ ಕಾರಣ ಅವರು ಊಟಕ್ಕೆ ಅಲ್ಲಿಗೆ ಹೋಗಬೇಕಾಯಿತು. ಅದು ಸ್ಟಾರ್ ಹೊಟೇಲ್ ಅಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ನಾವು ಬಂದ ನಂತರ ಪ್ರಕರಣದ ತನಿಖೆಯು ವ್ಯವಸ್ಥಿತವಾಗಿ ನಡೆಯುತ್ತಿದೆ. ನಾನೇ ಖುದ್ದು ಆ ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದೇನೆ. ಉನ್ನತ ಮಟ್ಟದ ತನಿಖೆಯ ಬಗ್ಗೆ ಸರಕಾರ ಅಥವಾ ಮೇಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು ನಾವಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸಾಮಾಜಿಕ ತಾಣಗಳಲ್ಲಿ ಹರಿದಾಡುವ ವದಂತಿಗಳು ಹಾಗೂ ಪತ್ರಿಕೆಯಲ್ಲಿ ಬರುತ್ತಿರುವ ಕೆಲ ಸುದ್ದಿಗಳಿಂದ ಮುಂದೆ ಪ್ರಕರಣದ ವಿಚಾರಣೆ ವೇಳೆ ತುಂಬಾ ತೊಂದರೆಯಾಗಲಿದೆ. ಅಲ್ಲದೆ ಅದು ಆರೋಪಿಗಳಿಗೆ ಸಹಾಯವಾಗುವ ಸಾಧ್ಯತೆಗಳಿವೆ ಎಂದು ಎಸ್ಪಿ ಬಾಲಕೃಷ್ಣ ಹೇಳಿದರು.

ಆರೋಪಿಗಳು ಇಂದು ಕೋರ್ಟ್‌ಗೆ

ಕೊಲೆ ಪ್ರಕರಣದ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಆ.16ಕ್ಕೆ ಮುಗಿಯಲಿರುವುದರಿಂದ ಅವರನ್ನು ಪೊಲೀಸರು ನಾಳೆ ನ್ಯಾಯಾ ಲಯದ ಮುಂದೆ ಹಾಜರುಪಡಿಸಲಿದ್ದಾರೆ.

ರಾಜೇಶ್ವರಿ ಹಾಗೂ ನವನೀತ್ ಕಳೆದ ಎಂಟು ದಿನಗಳಿಂದ ಪೊಲೀಸರ ವಶದಲ್ಲಿದ್ದರೆ ನಿರಂಜನ್ ಭಟ್ ನಾಲ್ಕು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿ ದ್ದಾನೆ. ಆದುದರಿಂದ ನಿರಂಜನ್ ಭಟ್‌ನನ್ನು ಪೊಲೀಸರು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ. ಇವರೆಲ್ಲರ ಕಸ್ಟಡಿ ಅವಧಿ ನಾಳೆ ಸಂಜೆಯ ವರೆಗೆ ಇರುವುದರಿಂದ ಇವರನ್ನು ನಾಳೆ ಸಂಜೆ ವೇಳೆ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಾಧ್ಯತೆಗಳಿವೆ.

ಮೂರು ಹೊಳೆಯಲ್ಲಿ ಸಾಕ್ಷ ನಾಶ

ಭಾಸ್ಕರ್ ಶೆಟ್ಟಿ ಕೊಲೆಗೈದ ಬಳಿಕ ಆರೋಪಿಗಳು ಸಾಕ್ಷನಾಶಕ್ಕೆ ಸಾಕಷ್ಟು ಯೋಜನೆ ರೂಪಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಮೃತದೇಹವನ್ನು ಮನೆಯಲ್ಲಿ ಸುಟ್ಟ ಬಳಿಕ ಅದರ ಅಸ್ಥಿಯನ್ನು ಪಳ್ಳಿ ಹೊಳೆ ಯಲ್ಲಿ ಎಸೆದರೆ, ಹೋಮಕುಂಡದ ಟೈಲ್ಸ್, ಇಟ್ಟಿಗೆಗಳನ್ನು ಸಚ್ಚರಿಪೇಟೆ ಹೊಳೆಗೆ ಎಸೆಯಲಾಗಿದೆ. ಅದೇ ರೀತಿ ಪೆಪ್ಪರ್ ಸ್ಪ್ರೇಯನ್ನು ಇನ್ನೊಂದು ಹೊಳೆಗೆ ಎಸೆದಿರುವುದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಅದರಂತೆ ಪೊಲೀಸರು ಅದನ್ನು ಹುಡುಕಾಡಿ ಸಂಗ್ರಹಿಸುವ ಕಾರ್ಯ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News