ಕಾಪು: ಹೆದ್ದಾರಿಯ ಮಧ್ಯೆಯೇ ಸುಟ್ಟು ಭಸ್ಮವಾದ ಕಾರು
ಕಾಪು, ಆ.16: ಬೆಂಕಿ ಆಕಸ್ಮಿಕದಿಂದ ಚಲಿಸುತ್ತಿದ್ದ ಕಾರು ಸಂಪೂರ್ಣ ಸುಟ್ಟು ಭಸ್ಮಗೊಂಡ ಘಟನೆ ಇಂದು ಸಂಜೆ ವೇಳೆ ಕಾಪು ಹೊಸ ಮಾರಿಗುಡಿ ಎದುರಿನ ರಾಷ್ಟ್ರೀಯ ಹೆದ್ದಾರಿ 66ರ ಫ್ಲೈಓವರ್‌ನಲ್ಲಿ ಸಂಭವಿಸಿದೆ.
ಕುಂದಾಪುರದ ಫೋಟೋಗ್ರಫರ್ ದಿನೇಶ್ ಎಂಬವರು ಮುಂಡ್ಕೂರಿನಲ್ಲಿ ಕಾರ್ಯಕ್ರಮ ಮುಗಿಸಿ ತನ್ನ ವ್ಯಾಗನರ್ ಕಾರಿನಲ್ಲಿ ಕುಂದಾಪುರ ಕಡೆಗೆ ಬರುತ್ತಿದ್ದಾಗ ದಾರಿ ಮಧ್ಯೆ ಉಂಟಾದ ಶಬ್ದದಿಂದ ಕೂಡಲೇ ಕಾರನ್ನು ಕಾಪು ಫ್ಲೈಓವರ್ ಮೇಲೆ ನಿಲ್ಲಿಸಿದರು. ನಂತರ ಕಾರಿನ ಬಾನೆಟ್ ತೆರೆದು ನೀರು ಹಾಕಿದರು. ಆಗ ತಕ್ಷಣ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿತು.
ಅಪಾಯವನ್ನು ಅರಿತ ಅವರು ಕೂಡಲೇ ಕಾರಿನೊಳಗೆ ಇದ್ದ ತನ್ನ ಕ್ಯಾಮೆರಾ, ಟಿವಿ, ಸ್ಟಾಂಡ್ ಸಹಿತ ಹಲವು ಪರಿಕರಗಳನ್ನು ಹೊರ ತಂದರು. ಕ್ಷಣ ಮಾತ್ರದಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡು ಉರಿಯಿತು. ಇದರ ಹೊಗೆ ಇಡೀ ಪರಿಸರವನ್ನು ಆವರಿಸಿ ಆತಂಕವನ್ನು ಉಂಟು ಮಾಡಿತ್ತು. ಇದರಿಂದ ಈ ಫ್ಲ್ಲೈಓವರ್‌ನ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು.
ಸ್ಥಳಕ್ಕೆ ಆಗಮಿಸಿದ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರಿನ ಬೆಂಕಿಯನ್ನು ನಂದಿಸಿದರು. ಆದರೆ ಅದಾಗಲೇ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಇದರಿಂದ ಸುಮಾರು ಮೂರು ಲಕ್ಷ ರೂ. ನಷ್ಟ ಉಂಟಾಗಿದೆ. ಕಾರಿನ ಬ್ಯಾಟರಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯುಟ್‌ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಕಾಪು ಶಾಸಕ ವಿನಯಕುಮಾರ್ ಸೊರಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.