ಭಾರತಕ್ಕೆ ಸಾಲು ಸಾಲು ಸೋಲು: ನೀಗದ ಪದಕ ಬರ
ರಿಯೊ ಡಿ ಜನೈರೊ, ಆ.16: ಒಲಿಂಪಿಕ್ಸ್‌ನಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದ್ದು, 10ನೆ ದಿನ ಮತ್ತಷ್ಟು ಸೋಲುಗಳೊಂದಿಗೆ ಭಾರತದ ಪದಕ ಆಸೆ ಕ್ಷೀಣವಾಗುತ್ತಿದೆ. ಪಿ.ವಿ.ಸಿಂಧು ಹಾಗೂ ಕೆ.ಶ್ರೀಕಾಂತ್ ಬ್ಯಾಡ್ಮಿಂಟನ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವುದಷ್ಟೇ ಭಾರತದ ಪಾಲಿಗೆ ಆಶಾಕಿರಣ.
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು, ಚೀನಾ ತೈಪೆಯ ಯಿಂಗ್ ತ್ಸು ತೈ ವಿರುದ್ಧ 21-13, 21-15 ಅಂತರದಿಂದ ಗೆದ್ದು 8ರ ಘಟ್ಟಕ್ಕೆ ಮುನ್ನಡೆದಿದ್ದಾರೆ. ದಿನದ ಆರಂಭದಲ್ಲಿ ಕೆ.ಶ್ರೀಕಾಂತ್ ಕೂಡಾ ಕ್ವಾರ್ಟರ್ ಫೈನಲ್ ತಲುಪಿದ್ದರು.
ಭಾರತದ ಬಾಕ್ಸಿಂಗ್ ಚಾಂಪಿಯನ್ ವಿಕಾಸ್‌ಕೃಷ್ಣ ಅವರ ಒಲಿಂಪಿಕ್ಸ್ ಅಭಿಯಾನ ಕ್ವಾರ್ಟರ್ ಫೈನಲ್‌ನಲ್ಲೇ ಮುಗಿಯಿತು. ಇದರೊಂದಿಗೆ ಭಾರತದ ಬಾಕ್ಸರ್‌ಗಳ ಮೇಲೆ ಇಟ್ಟಿದ್ದ ನಿರೀಕ್ಷೆಯೂ ಹುಸಿಯಾಯಿತು. ಪುರುಷರ 75 ಕೆ.ಜಿ. ಮಿಡ್ಲ್‌ವೈಟ್ ವಿಭಾಗದಲ್ಲಿ ವಿಕಾಸ್, ಉಜ್ಬೆಕಿಸ್ತಾನದ ಮೆಲಿಕುಝಿವ್ ಬೆಕ್ಟೆಮಿರ್ ಅವರಿಗೆ 0-3ರಿಂದ ಶರಣಾದರು.
ಈ ಮಧ್ಯೆ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದೆ. ಭಾರತದ ದೀರ್ಘ ಅಂತರ ಓಟದ ಕೋಚ್ ನಿಕೋಲಯ್ ಸ್ನೆಸರೇವ್ ಅವರನ್ನು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದೆ. ಮ್ಯಾರಾಥಾನ್‌ನಲ್ಲಿ ಭಾರತದ ಓ.ಪಿ.ಜೈಶಾ, ಓಟ ಪೂರ್ಣಗೊಳಿಸಿ ಪ್ರಜ್ಞೆತಪ್ಪಿ ಬಿದ್ದರು. ತಕ್ಷಣ ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಆಕೆಯ ಜತೆ ಕೋಚ್ ನಿಕೋಲಯ್ ಕೂಡಾ ಒಳಕ್ಕೆ ಹೋಗುವ ಪ್ರಯತ್ನ ಮಾಡಿದಾಗ ವೈದ್ಯಕೀಯ ಸಿಬ್ಬಂದಿ ತಡೆದರು. ಆಗ ವೈದ್ಯಕೀಯ ಸಿಬ್ಬಂದಿಯನ್ನು ತಳ್ಳಿ ಒಳಹೋಗುವ ಪ್ರಯತ್ನಕ್ಕೆ ಕೋಚ್ ಮುಂದಾದರು ಎನ್ನಲಾಗಿದೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪವೂ ನಿಕೋಲಯ್ ವಿರುದ್ಧ ಇದೆ. ಸಿಬ್ಬಂದಿಯ ದೂರಿನ ಮೇರೆಗೆ ಅವರನ್ನು ಪೊಲೀಸರು ಬಂಧಿಸಿದರು.