×
Ad

ಭಾರತದ ಅಥ್ಲೆಟಿಕ್ ಕೋಚ್ ಅನ್ನು ವಶಕ್ಕೆ ತೆಗೆದುಕೊಂಡಿದ್ದ ರಿಯೋ ಪೊಲೀಸರು!

Update: 2016-08-16 08:33 IST

ರಿಯೊ ಡಿ ಜನೈರೊ, ಆ.16: ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ರಿಯೊ ಪೊಲೀಸರು ಭಾರತದ ದೀರ್ಘದೂರದ ಅಥ್ಲೆಟಿಕ್ ಕೋಚ್ ಸಿಕೋಲಯ್ ಸ್ನೆಸೆರೆವ್ ಅವರನ್ನು ಬಂಧಿಸಿ, ಅರ್ಧದಿನ ಕಾಲ ವಶದಲ್ಲಿಟ್ಟುಕೊಂಡು ಬಳಿಕ ಬಿಡುಗಡೆ ಮಾಡಿದ ಘಟನೆ ನಡೆದಿದೆ. ಪಾಲಿಕ್ಲಿನಿಕ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ಬಗ್ಗೆ ಮಹಿಳಾ ವೈದ್ಯರೊಬ್ಬರು ನೀಡಿದ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿತ್ತು.

ಬೈಲೊರಷ್ಯಾ ಮೂಲದ ಸ್ನೆಸರೆವ್ ಭಾರತೀಯ ದೀರ್ಘದೂರದ ಅಥ್ಲೀಟ್‌ಗಳಾದ ಲಲಿತಾ ಬಾಬರ್, ಸುಧಾಸಿಂಗ್ ಹಾಗೂ ಒ.ಪಿ.ಜೈಶಾ ಅವರಿಗೆ ತರಬೇತಿ ನೀಡುತ್ತಿದ್ದರು. ರವಿವಾರ ಬಂಧನಕ್ಕೊಳಗಾಗಿ ಅರ್ಧ ದಿನ ಸ್ಥಳೀಯ ಠಾಣೆಯಲ್ಲಿ ಕಳೆದ ಅವರನ್ನು ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶದ ಬಳಿಕ ಕೊನೆಗೆ ಬಿಡುಗಡೆ ಮಾಡಲಾಯಿತು.

ವಿವಾದವನ್ನು ಇತ್ಯರ್ಥಪಡಿಸಲಾಗಿದ್ದು, ಸ್ನೆಸರೆವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯದರ್ಶಿ ಸಿ.ಕೆ.ವಲ್ಸನ್ ಹೇಳಿದ್ದಾರೆ. ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿ, ಅವರನ್ನು ಬಿಡುಗಡೆಗೊಳಿಸಿದ್ದು, ಅವರ ವಿರುದ್ಧ ಯಾವುದೇ ಕ್ರಮ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮ್ಯಾರಾಥಾನ್‌ನಲ್ಲಿ ಭಾರತದ ಒ.ಪಿ.ಜೈಶಾ, ಓಟ ಪೂರ್ಣಗೊಳಿಸಿ ಪ್ರಜ್ಞೆತಪ್ಪಿ ಬಿದ್ದರು. ತಕ್ಷಣ ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಆಕೆಯ ಜತೆ ಕೋಚ್ ನಿಕೋಲಯ್ ಕೂಡಾ ಒಳಕ್ಕೆ ಹೋಗುವ ಪ್ರಯತ್ನ ಮಾಡಿದಾಗ ವೈದ್ಯಕೀಯ ಸಿಬ್ಬಂದಿ ತಡೆದರು. ಆಗ ಮಹಿಳಾ ವೈದ್ಯೆಯನ್ನು ತಳ್ಳಿ ಒಳಹೋಗುವ ಪ್ರಯತ್ನಕ್ಕೆ ಕೋಚ್ ಮುಂದಾದರು ಎನ್ನಲಾಗಿದೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪವೂ ನಿಕೋಲಯ್ ವಿರುದ್ಧ ಇದ್ದ ಹಿನ್ನೆಲೆಯಲ್ಲಿ ಮಹಿಳಾ ವೈದ್ಯೆ ದೂರಿನ ಮೇರೆಗೆ ಅವರನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News