×
Ad

ಅನಂತಪದ್ಮನಾಭ ದೇವಾಲಯದಿಂದ ಕೋಟ್ಯಾಂತರ ರೂ.ಮೌಲ್ಯದ ಚಿನ್ನದ ಕಲಶಗಳು ಕಣ್ಮರೆ !

Update: 2016-08-16 12:52 IST

ತಿರುವನಂತಪುರಂ, ಆ.16: ಕೇರಳದ ಅನಂತಪದ್ಮನಾಭ ದೇಗುಲದಲ್ಲಿ ಪತ್ತೆಯಾದ ರಹಸ್ಯ ಕೊಠಡಿಗಳಲ್ಲಿದ್ದ ಸಂಪತ್ತಿನಿಂದ 186 ಕೋಟಿ ವೌಲ್ಯದ 769 ಚಿನ್ನದ ಕಲಶಗಳು, ಲಕ್ಷಾಂತರ ರೂ. ವೌಲ್ಯದ ಬೆಳ್ಳಿಯ ಸಹಿತ ವಜ್ರಾಭರಣಗಳು ನಾಪತ್ತೆಯಾಗಿವೆ ಎನ್ನಲಾಗಿದೆ. ದೇವಾಲಯದಲ್ಲಿ ಪತ್ತೆಯಾದ ಸಂಪತ್ತಿನ ವೌಲ್ಯಮಾಪನ ನಡೆಸಿರುವ ನಿವೃತ್ತ ಮಹಾ ಲೇಖಪಾಲ ವಿನೋದ್ ರಾಯ್ ನೇತೃತ್ವದ ಸಮಿತಿಯು ದೇವಾಲಯದಿಂದ ಕೋಟ್ಯಾಂತರ ರೂ. ವೌಲ್ಯದ ಆಭರಣಗಳು ನಾಪತ್ತೆಯಾಗಿರುವ ಕುರಿತು ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದೆ.

ಅನಂತಪದ್ಮನಾಭ ದೇವಸ್ಥಾನದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳಲ್ಲಿದ್ದ ಸುಮಾರು 263 ಕೆಜಿ ಚಿನ್ನಾಭರಣಗಳು ನಾಪತ್ತೆಯಾಗಿವೆ. ಆಭರಣಗಳನ್ನು ಕರಗಿಸಿ ಶುದ್ಧೀಕರಿಸುವ ಸಲುವಾಗಿ ತೆಗೆದು ವಾಪಸು ತಂದಿಲ್ಲ ಎಂಬ ವಿಚಾರವನ್ನು ರಾಯ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇವಾಲಯದ ಕೊಠಡಿಗಳ ಪೈಕಿ ಅಪಾಯಕಾರಿ ಎಂದೆನ್ನಲಾಗಿದ್ದ ‘ಬಿ’ ಕೊಠಡಿಯನ್ನು 7 ಬಾರಿ ತೆರೆದಿರುವುದನ್ನು ವೌಲ್ಯ ಮಾಪನ ಸಮಿತಿ ಪತ್ತೆ ಹಚ್ಚಿದೆ.

ನೆಲ ಮಾಳಿಗೆಯ ರಹಸ್ಯ ಕೊಠಡಿಗಳಲ್ಲಿರುವ ಪ್ರತಿ ಚಿನ್ನದ ಕಲಶಕ್ಕೆ ವಿಶೇಷವಾದ ಕ್ರಮಾಂಕವಿದೆ. 1ರಿಂದ 1000 ತನಕದ ಕ್ರಮಾಂಕಗಳ ಕಲಶಗಳನ್ನು 2002ರ ತನಕ ದೇವಸ್ಥಾನದ ವಿವಿಧ ಉತ್ಸವಗಳ ಸಂದರ್ಭಗಳಲ್ಲಿ ತೆಗೆಯಲಾಗಿದೆ ಎನ್ನಲಾಗುತ್ತಿದೆ. 2002ರ ಬಳಿಕ 1001ನೆ ಕ್ರಮಾಂಕದಿಂದ ಕಲಶಗಳನ್ನು ತೆಗೆಯಲಾಗಿದೆ. 2011ರ ಎ. 1ರಂದು 1988 ಕ್ರಮಾಂಕದಿಂದ ಕಲಶಗಳನ್ನು ತೆಗೆಯಲಾಗಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಗಮನಿಸಿದರೆ ಒಟ್ಟು 6 ಕೊಠಡಿಗಳಲ್ಲಿ 1988 ಚಿನ್ನದ ಕಲಶಗಳಿದ್ದವು ಎಂದಾಗುತ್ತದೆ. ಈ ಪೈಕಿ 822 ಕಲಶಗಳನ್ನು ಆಭರಣ ಹಾಗೂ ಇತರ ಒಡವೆ ತಯಾರಿಸುವ ಸಲುವಾಗಿ ಕರಗಿಸಲಾಗಿದೆ. ಇವೆಲ್ಲದರ ಬಳಿಕ ಲೆಕ್ಕಾಚಾರದ ಪ್ರಕಾರ ದೇವಾಲಯದಲ್ಲಿ ಒಟ್ಟು 1,166 ಕಲಶಗಳು ಉಳಿಯಬೇಕು. ಆದರೆ ಈಗ ಇರುವುದು 397 ಕಲಶಗಳು ಮಾತ್ರ. ಅಂದರೆ 769 ಕಲಶಗಳು ಕಣ್ಮರೆಯಾಗಿವೆ. ಅಂರೆ ಈಗಿನ ಮಾರುಕಟ್ಟೆಯ ಬೆಲೆಯ ಅಂದಾಜು 186 ಕೋ. ರೂ. ವೌಲ್ಯದ 776 ಕೆಜಿ ತೂಕದ ಕಲಶಗಳು ನಾಪತ್ತೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರಗಿಸಿ ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ಶೇ. 30 ಚಿನ್ನ ನಷ್ಟವಾಗಿರುವ ದಾಖಲೆಯಿದೆ. ಕರಗಿಸಲು ಕೊಟ್ಟ 887 ಕೆ.ಜಿ. ಚಿನ್ನದಲ್ಲಿ ವಾಪಸು ಬಂದಿರುವುದು 624 ಕೆ.ಜಿ. ಮಾತ್ರ. 263 ಕೆಜಿ ಚಿನ್ನ ಕಳೆದುಹೋಗಿದೆ. ಅಂದಿನ ಆಡಳಿತ ಸಮಿತಿಯ ಆದೇಶದಂತೆ 2007,ಆಗಸ್ಟ್‌ನಲ್ಲಿ ಸಿ ಮತ್ತು ಇ ರಹಸ್ಯ ಕೊಠಡಿಗಳಲ್ಲಿರುವ 397 ಚಿನ್ನದ ಕಲಶಗಳು ಸೇರಿ 1,022 ಅಪರೂಪದ ಆಭರಣಗಳ ಫೋಟೊ ತೆಗೆಯಲಾಗಿತ್ತು. ಆದರೆ ಈವರೆಗೂ ಆಲ್ಬಂ ತಯಾರಾಗಿಲ್ಲ ಹಾಗೂ ಫೋಟೊಗಳ ನೆಗೆಟಿವ್ ಕೂಡ ಇಲ್ಲ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂಬ ಮಾಹಿತಿ ವರದಿಯಲ್ಲಿದೆ.

2002-2005ರ ನಡುವೆ ಕರಗಿಸಿ ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ 59 ಲ.ರೂ. ವೌಲ್ಯದ ಚಿನ್ನ ಕಳೆದು ಹೋಗಿದೆ. ಜಿ ಕೊಠಡಿಯಲ್ಲಿದ್ದ 14 ಲ. ರೂ. ಮೌಲ್ಯದ 35 ಕೆ.ಜಿ. ಬೆಳ್ಳಿ ಗಟ್ಟಿಗಳು ಇದೇ ಅವಧಿಯಲ್ಲಿ ನಾಪತ್ತೆಯಾಗಿವೆ. 2009ರಿಂದ 2014ರ ನಡುವೆ ಹುಂಡಿಗೆ ಬಿದ್ದ 14.78 ಲ.ರೂ. ವೌಲ್ಯದ ಚಿನ್ನ ಮತ್ತು ಬೆಳ್ಳಿಯ ಲೆಕ್ಕ ಸಿಕ್ಕಿಲ್ಲ. 2006 ಡಿಸೆಂಬರ್‌ನಿಂದ 2008, ನವೆಂಬರ್ ತನಕ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಒಪ್ಪಿಸಿಲ್ಲ ಎಂದು ವಿನೋದ್ ರಾಯ್ ತನ್ನ ವರದಿಯಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತದಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದ ಬಳಿಕ ಸುಪ್ರೀಂ ಕೋರ್ಟ್ ವಿನೋದ್ ರಾಯ್ ನೇತೃತ್ವದಲ್ಲಿ ಲೆಕ್ಕ ಪರಿಶೋಧನೆ ಸಮಿತಿಯನ್ನು ನೇಮಕ ಮಾಡಿತ್ತು. ಈ ಸಮಿತಿ 2004ರಿಂದ 2014ರ ತನಕದ ಲೆಕ್ಕ ಪರಿಶೋಧನೆ ಸುಮಾರು 1,000 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News