×
Ad

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳಿಗೆ ಆ.24ರವರೆಗೆ ನ್ಯಾಯಾಂಗ ಬಂಧನ

Update: 2016-08-16 17:38 IST

ಉಡುಪಿ, ಆ.16: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳನ್ನು ಪೊಲೀಸರು ಇಂದು ಉಡುಪಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಮೂವರಿಗೆ ಆ.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ತನಿಖಾಧಿಕಾರಿ ಸುಮನಾ ನೇತೃತ್ವದಲ್ಲಿ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರನ್ನು ಸಂಜೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಣೆ ನಡೆಸಿ ಬಳಿಕ ಬಿಗಿ ಭದ್ರತೆ ಯೊಂದಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಈ ಹಿಂದೆ ಹಾಜರುಪಡಿಸಲಾಗಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣನ್ ರಜೆಯಲ್ಲಿದ್ದ ಕಾರಣ ಇಂದು ಈ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ಪೊಲೀಸರು ಆರೋಪಿ ಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಶಿವರಾಮ ಮೂವರು ಆರೋಪಿಗಳನ್ನು ಒಂಭತ್ತು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಹಿರಿಯಡ್ಕ ಕಾರಾಗೃಹದಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಆರೋಪಿ ರಾಜೇಶ್ವರಿಯನ್ನು ಮಂಗಳೂರು ಕಾರಾಗೃಹಕ್ಕೆ ಕಳುಹಿಸ ಲಾಯಿತು. ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಹಿರಿಯಡ್ಕ ಕಾರಾಗೃಹಕ್ಕೆ ಕರೆದೊಯ್ದರು.

ನ್ಯಾಯಾಲಯದಲ್ಲಿ ಆರೋಪಿಗಳನ್ನು ವೀಕ್ಷಿ ಸಲು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಆರೋಪಿಗಳನ್ನು ಕರೆ ದುಕೊಂಡು ಬರುವ ವೇಳೆ ಪೊಲೀಸರು ಸಾರ್ವಜನಿಕರನ್ನು ಚದುರಿಸಿ ದೂರ ಕಳುಹಿಸಿದರು. ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಪ್ರಕರಣದ ಸಹಾಯಕ ತನಿಖಾಧಿಕಾರಿ ಸಂಪತ್ ಕುಮಾರ್, ಉಡುಪಿ ವೃತ್ತ ನಿರೀಕ್ಷಕ ಜೈಶಂಕರ್, ಉಡುಪಿ ನಗರ ಠಾಣಾಧಿಕಾರಿ ಅನಂತಪದ್ಮನಾಭ ಹಾಜರಿದ್ದು, ಭದ್ರತೆಯ ಒದಗಿಸಿದರು.

ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಆ.8ರಿಂದ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಪೊಲೀಸರು ಮತ್ತೆ ಆ.12ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ನಾಲ್ಕು ದಿನಗಳ ಕಾಲ ಅಂದರೆ ಆ.16ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿ ದ್ದರು. ಅದೇ ರೀತಿ ನಿರಂಜನ್ ಭಟ್‌ನನ್ನು ಆ.12ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಪೊಲೀಸರು ಆ.16ರವರೆಗೆ ಅಂದರೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಈ ಮೂವರ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಗಿದ ಕಾರಣ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಡಿಎನ್‌ಎ: ಆ.18ರಂದು ಅರ್ಜಿ ವಿಚಾರಣೆ

ಈಗಾಗಲೇ ಪೊಲೀಸರಿಗೆ ಹೊಳೆಯಲ್ಲಿ ದೊರೆತಿರುವ ಮೂಳೆ ಸಹಿತ ಇತರ ವಸ್ತುಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಭಾಸ್ಕರ್ ಶೆಟ್ಟಿಯ ತಾಯಿ ಹಾಗೂ ಸಹೋದರರ ರಕ್ತದ ಸ್ಯಾಂಪಲ್‌ನ್ನು ಪಡೆಯಬೇಕಾಗಿದೆ. ಅದಕ್ಕೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳಲು ಪೊಲೀಸರು ಆ.13ಕ್ಕೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ಅದರ ವಿಚಾರಣೆ ಆ.18ರಂದು ನಡೆಯಲಿದೆ.

ಸದ್ಯ ಈ ಪ್ರಕರಣದಲ್ಲಿ ಆರೋಪಿಗಳು ಯಾವುದೇ ಜಾಮೀನು ಅರ್ಜಿ ಯನ್ನು ನ್ಯಾಯಾಲಯಕ್ಕೆ ಹಾಕಿಲ್ಲ. ಆರೋಪಿಗಳಿಗೆ ಈ ನ್ಯಾಯಾಲಯ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕಲು ಅವಕಾಶಗಳಿವೆ. ನ್ಯಾಯಾಂಗ ಬಂಧನಕ್ಕೆ ಗುರಿಯಾಗಿರುವ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಬಹುದು. ನ್ಯಾಯಾ ಧೀಶರು ಅದರ ಅಗತ್ಯ ನೋಡಿಕೊಡಬಹುದು ಎಂದು ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್.ಎನ್. ತಿಳಿಸಿದ್ದಾರೆ.

ಅಗತ್ಯ ಬಿದ್ದರೆ ಪೊಲೀಸ್ ಕಸ್ಟಡಿಗೆ

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳಲಿಲ್ಲ. ಮುಂದೆ ಅಗತ್ಯ ಬಿದ್ದರೆ ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಈಗ ಆರೋಪಿಗಳು ಇಲ್ಲದೆಯೇ ನಾವೇ ಹೊಳೆಯಲ್ಲಿ ಸಾಕ್ಷಗಳನ್ನು ಹುಡುಕಾಟ ನಡೆಸಿ ಸಂಗ್ರಹ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News