×
Ad

‘ಸಕಾಲ’ದಡಿ 15 ದಿನಗಳೊಳಗೆ ಸ್ಮಾರ್ಟ್ ರೇಷನ್ ಕಾರ್ಡ್ ಒದಗಿಸಲು ಕ್ರಮ: ಸಚಿವ ಯು.ಟಿ.ಖಾದರ್

Update: 2016-08-16 19:45 IST

ಮಂಗಳೂರು, ಆ.16:ರಾಜ್ಯದಲ್ಲಿ ಪಡಿತರ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಪಡಿತರ ಖಾತ್ರಿ ಯೋಜನೆ ಜಾರಿಗೆ ಬರಲಿದೆ. ಪಡಿತರ ಚೀಟಿಯನ್ನು ಸ್ಮಾರ್ಟ್ ಕಾರ್ಡ್ ರೂಪಕ್ಕೆ ಪರಿವರ್ತಿಸಲಾಗುವುದು. ಪಡಿತರ ಚೀಟಿ ವಿತರಣೆಗೆ ಹೊಸ ಮಾನದಂಡ ರಚನೆ ಮಾಡಲು ಸಲ್ಲಿಸಲಾದ ಪ್ರಸ್ತಾಪಕ್ಕೆ ಸಚಿವ ಸಂಪುಟ ಸಮ್ಮತಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಜಾಗೃತ ಸಮಿತಿಯನ್ನು ರಚಿಸಲಾಗುವುದು. ಕೂಪನ್ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪೈಲಟ್ ಯೋಜನೆಯ ಪ್ರಕಾರ ಜಾರಿ ಮಾಡಲಾಗಿದೆ. ಇದರಿಂದ ಅರ್ಹರಿಗೆ ಪಡಿತರ ಆಹಾರ ಸಾಮಗ್ರಿಗಳು ದೊರೆಯುವಂತೆ ಮಾಡಲಾಗುತ್ತಿದೆ. ಪಡಿತರ ಚೀಟಿಯನ್ನು ಪಾಸ್‌ಪೋಟ್ ಪಡೆಯುವುದಕ್ಕಿಂತಲೂ ಸುಲಭವಾಗಿ ಸಕಾಲ ಯೋಜನೆಯ ಮೂಲಕ 15 ದಿನಗಳ ಕಾಲ ಮಿತಿಯಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪಡಿತರ ವ್ಯವಸ್ಥೆಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಎಂಬ ವರ್ಗೀಕರಣದ ಬದಲಾಗಿ ‘ಆದ್ಯತಾ ವಲಯ’ ಹಾಗೂ ‘ಆದ್ಯತಾ ರಹಿತ ವಲಯ’ ಎಂದು ವಿಂಗಡಿಸಿ ಪಡಿತರ ಚೀಟಿಯನ್ನು ನೀಡಲಾಗುವುದು. ಹಳೆಯ ಪಡಿತರ ಚೀಟಿಗೆ ಹೊಸ ಸ್ವರೂಪ ನೀಡಿ ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಗ್ರಾಹಕರು ಬಳಸಲು ಅನುಕೂಲವಾಗುವಂತೆ ಅದರ ಸ್ವರೂಪವನ್ನು ಬದಲಾಯಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಪಡಿತರ ವಿತರಣೆಯ ವ್ಯವಸ್ಥೆಯಲ್ಲಿ ಸಾಕಷ್ಟು ಸಬ್ಸಿಡಿ ಹಣ ಸೋರಿಕೆಯಾಗುತ್ತಿದೆ. ಈ ಸೋರಿಕೆಯನ್ನು ಮತ್ತು ಬೋಗಸ್ ಕಾರ್ಡ್ ಪಡೆಯುವುದನ್ನು ತಡೆಯಲು ಪಡಿತರ ವ್ಯವಸ್ಥೆಯಲ್ಲಿ ಕೂಪನ್ ಪದ್ಧತಿಯನ್ನು ಜಾರಿಗೆ ತರಲಾಗುವುದು. ಬಿಪಿಎಲ್ ಪಡಿತರ ಚೀಟಿ ವಿತರಿಸಲು ನಿಗದಿ ಪಡಿಸಲಾದ 14 ಮಾನದಂಡಗಳ ಬದಲಾಗಿ ಸರಳ ಮಾನ ದಂಡಗಳನ್ನು ಬಳಸಲಾಗುವುದು. ಹೊಸ ಮಾನದಂಡದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಹೊಂದಿರುವ ವಾಸದ ಮನೆಯ ವಿಸ್ತೀರ್ಣವನ್ನು ಪರಿಗಣಿಸದೆ ಪಡಿತರ ಚೀಟಿ ನೀಡಲಾಗುವುದು. ನಗರ ಪ್ರದೇಶದಲ್ಲಿ 1,200 ಚದರಡಿ ವಿಸ್ತೀರ್ಣದ ಮನೆ ಹೊಂದಿದವರು, ದ್ವಿಚಕ್ರ ವಾಹನ ಹೊಂದಿದವರು, ಒಂದು ಬಾಡಿಗೆ ವಾಹನ ಹೊಂದಿದವರು, 150 ಯೂನಿಟ್ ಒಳಗೆ ಮಾಸಿಕ ವಿದ್ಯುತ್ ಬಳಸುವವರು, ದ್ವಿಚಕ್ರ ವಾಹನ ಹೊಂದಿದವರು ಆದ್ಯತಾ ವಲಯದ ಕಾರ್ಡ್ ಪಡೆಯಲು ಅರ್ಹರಾಗುತ್ತಾರೆ. ತೆರಿಗೆ ಪಾವತಿಸುವ ಸರಕಾರಿ ಅಧಿಕಾರಿಗಳನ್ನು ಹೊರತು ಪಡಿಸಿ ಒದಕ್ಕಿಂತ ಹೆಚ್ಚು ವಾಹನ ಹೊಂದಿರುವವರು ಆದ್ಯತಾ ರಹಿತ ವಲಯಕ್ಕೆ ಸೇರುತ್ತಾರೆ. ರಾಜ್ಯದ ಮುಖ್ಯಮಂತ್ರಿಯವರ ಜೊತೆ ಆ. 18ರಂದು ಈ ಬಗ್ಗೆ ಸಭೆ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಸರಕಾರಿ ಮಾಪನ ಯಂತ್ರ ಅಳವಡಿಕೆ

ಗ್ರಾಹಕರಿಗೆ ವಸ್ತುಗಳ ಮಾಪನದಲ್ಲಿ ಆಗುವ ವಂಚನೆಯನ್ನು ತಪ್ಪಿಸಲು ಸರಕಾರದ ವತಿಯಿಂದ ಮಾಪನ ಯಂತ್ರವನ್ನು ಅಳವಡಿಸಲಾಗುವುದು. ಈ ಯಂತ್ರದ ಮೂಲಕ ಮಾಲ್ ಹಾಗೂ ಆಭರಣದ ಆಂಗಡಿಗಳಲ್ಲಿ ಖರೀದಿಸಿದ ವಸ್ತುಗಳ ನೈಜ ತೂಕ ಹಾಗೂ ಗುಣಮಟ್ಟವನ್ನು ಗ್ರಾಹಕರು ಕಂಡು ಕೊಳ್ಳಬಹುದು. ಈ ಪ್ರಯೋಗವನ್ನು ಪ್ರಥಮ ಹಂತದಲ್ಲಿ ಬೆಂಗಳೂರಿನಲ್ಲಿ ಅಳವಡಿಸಲಾಗುವುದು. ಇದರಿಂದ ಹೊಸ ಮಾಪನ ಯಂತ್ರಗಳ ಮೂಲಕ ಅಳತೆಯಲ್ಲಿ (ತೂಕ)ವಂಚನೆಯಾಗುವುದನ್ನು ತಪ್ಪಿಸಲು ಪ್ರಯತ್ನಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಉಳ್ಳಾಲ ನಗರ ಸಭೆಯ ಅಧ್ಯಕ್ಷ ಹುಸೈನ್ ಕುಂಞ ಮೋನು , ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News