ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ
ಉಡುಪಿ, ಆ.16: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಯನ್ನು ಸಿಐಡಿ ಒಪ್ಪಿಸಿ ರಾಜ್ಯ ಗೃಹ ಸಚಿವಾಲಯ ಆದೇಶ ನೀಡಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಪ್ರಕರಣವನ್ನು ಉನ್ನತ ತನಿಖೆಗೆ ಒಪ್ಪಿಸುವಂತೆ ಬಂಟ ಸಮುದಾಯದ ಪ್ರಮುಖರು ಸಚಿವರಿಗೆ ಒತ್ತಾಯ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಚಿವ ಪ್ರಮೋದ್ ಆ.11ರಂದು ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಶಿಫಾರಸ್ಸು ಮಾಡಿದ್ದರು.
‘ನಾನು ಬರೆದ ಪತ್ರಕ್ಕೆ ಮನ್ನಣೆ ನೀಡಿ ಗೃಹ ಸಚಿವರು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಇಂದು ಸಂಜೆ 7ಗಂಟೆಗೆ ಗೃಹ ಕಚೇರಿಯಿಂದ ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಅದೇ ರೀತಿ ಈ ಹಿಂದೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್‌ನನ್ನು ವರ್ಗಾವಣೆ ಮಾಡುವಂತೆ ಇಂದು ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕೆಗೆ ತಿಳಿಸಿದರು.
‘ಪ್ರಕರಣವನ್ನು ಸಿಐಡಿ ಒಪ್ಪಿಸಿರುವ ಕುರಿತು ನಮಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.